ಅಸಮಾಧಾನಗೊಂಡಿದ್ದ ಸಮಾನಮನಸ್ಕ ಶಾಸಕರು ಪ್ರತ್ಯೇಕ ಸಭೆಗೆ ಹೈಕಮಾಂಡ್ ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಸಮಾನಮನಸ್ಕ ಶಾಸಕರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಕೊನೆ ಕ್ಷಣದಲ್ಲಿ ಸಭೆ ನಡೆದಿದ್ದರೂ ಸ್ವರೂಪ ಮಾತ್ರ ಬದಲಾವಣೆಯಾಗಿದೆ.

ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು, ಆನೇಕಲ್ ಶಿವಣ್ಣ, ಅಖಂಡ ಶ್ರೀನಿವಾಸ್‍ಮೂರ್ತಿ ಸೇರಿದಂತೆ ಅನೇಕರು ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನಗೊಂಡು ಪ್ರತ್ಯೇಕವಾಗಿ ಸಭೆ ನಡೆಸಲು ಮುಂದಾಗಿದ್ದರು.

ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ನಿಗಮ ಮಂಡಳಿ ನೇಮಕದಲ್ಲೂ ನ್ಯಾಯ ಸಿಕ್ಕಿಲ್ಲ. ಈವರೆಗೂ ಕಾರ್ಯಕರ್ತರನ್ನು ಸಣ್ಣ ಹುದ್ದೆಗೂ ನೇಮಕ ಮಾಡಿಲ್ಲ. ಕೆಲವು ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷ ಹುದ್ದೆಗೆ ನೇಮಿಸಲಾಗಿದೆಯಾದರೂ ಕೆಲಸ ಮಾಡಲು ಮುಕ್ತ ವಾತಾವರಣವಿಲ್ಲ ಎಂಬ ಹಲವಾರು ಕಾರಣಗಳಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದರು.

ಈ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಬಳಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಶಾಸಕರು ಪ್ರತ್ಯೇಕ ಸಭೆ ನಡೆಸಿ ಗುಂಪುಗಾರಿಕೆ ನಡೆಸಿದರೆ ಅದಕ್ಕೆ ಪ್ರತಿಯಾಗಿ ಜೆಡಿಎಸ್‍ನಲ್ಲೂ ಗುಂಪುಗಾರಿಕೆಗಳು ಆರಂಭಗೊಳ್ಳುತ್ತಿವೆ.

ಇದು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ, ಅತೃಪ್ತಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಬಳಿ ಹೇಳಿದ್ದರು. ಅದರಂತೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಶಾಸಕರು ಪ್ರತ್ಯೇಕ ಸಭೆ ನಡೆಸಬಾರದು ಎಂದು ತಾಕೀತು ಮಾಡಿತ್ತು.

ಈ ಸಭೆ ಸಮ್ಮಿಶ್ರ ಸರ್ಕಾರದ ವಿರುದ್ಧವಲ್ಲ ಎಂದು ಸ್ಪಷ್ಟ ಪಡಿಸಿರುವ ಕಾಂಗ್ರೆಸ್ ಶಾಸಕರು, ಬೆಂಗಳೂರ ಹಾಲು ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಆ ಹಿನೆಲೆಯಲ್ಲಿ ಸಭೆ ನಡೆಸುತ್ತಿದ್ದೇವೆ.

ರಾಜಕೀಯ ಪಕ್ಷವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಕರ್ತವ್ಯ. ಸಭೆಯ ಹಿಂದೆ ಯಾವ ದುರುದ್ದೇಶವೂ ಇಲ್ಲ. ಸಮ್ಮಿಶ್ರ ಸರ್ಕಾರದ ವಿರುದ್ಧದ ಕಾರ್ಯಾಚರಣೆಯೂ ಅಲ್ಲದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಬೈರೇಗೌಡ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಎಂ.ವೀರಪ್ಪಮೊಯ್ಲಿ, ಡಿ.ಕೆ.ಸುರೇಶ್, ಶಾಸಕರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin