ರಾಜೀನಾಮೆ ನೀಡಿರುವ ಅತೃಪ್ತರು ಮುಂಬೈಗೆ ಶಿಫ್ಟ್..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಭಿನ್ನಮತೀಯರು ಮುಂಬೈಗೆ ಶಿಫ್ಟಾಗುವ ಸಾಧ್ಯತೆ ಇದೆ. ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮನವೊಲಿಸಬಹುದೆಂಬ ಹಿನ್ನೆಲೆಯಲ್ಲಿ ಭಿನ್ನಮತೀಯರನ್ನು ಮುಂಬೈನ ರೆಸಾರ್ಟ್‍ನಲ್ಲಿಡಲು ಕಾರ್ಯತಂತ್ರ ರೂಪಿಸಲಾಗಿದೆ.

ಮುಂಬೈ ಹೊರವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ಅತೃಪ್ತ ಶಾಸಕರು ತಂಗಲಿದ್ದು, ಸರ್ಕಾರ ಪತನವಾದ ನಂತರವೇ ಅವರು ನಗರಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿದುಬಂದಿದೆ.  ಭಿನ್ನಮತೀಯರಿಗೆ ರೆಸಾರ್ಟ್‍ನಲ್ಲಿ ವಾಸ್ತವ್ಯದ ಜೊತೆಗೆ ಪೊಲೀಸ್ ರಕ್ಷಣೆ ಕೊಡಲು ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ.

ಶಾಸಕರನ್ನು ಯಾರೊಬ್ಬರೂ ಭೇಟಿಯಾಗದಂತೆ ನಿರ್ಬಂಧ ಹಾಕಲಾಗಿದೆ. ಮಾಧ್ಯಮದವರಿಗೂ ಪ್ರವೇಶಕ್ಕೆ ನಿಷೇಧ ಹಾಕಲಾಗಿದ್ದು, ಸ್ಥಳೀಯ ಪೊಲೀಸರು ಶಾಸಕರಿಗೆ ರಕ್ಷಣೆ ಒದಗಿಸಲು ಮುಂದಾಗಿದೆ.

ಕಾದು ನೋಡೋಣ: ಸಿದ್ದರಾಮಯ್ಯ :
ರಾಜ್ಯ ರಾಜಕೀಯದಲ್ಲಿ ಮೈತ್ರಿ ಸರ್ಕಾರದ 11 ಮಂದಿ ಶಾಸಕರು ಶನಿವಾರ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಡಿಕೆಶಿ ಎಂಟ್ರಿ ಕೊಟ್ಟಿದ್ದಾರೆ. ಕಾದು ನೋಡೋಣ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, 11 ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಸರ್ಕಾರ ಅಸ್ಥಿರ ಹೇಗಾಗುತ್ತೆ ಎಂದು ಪ್ರಶ್ನಿಸಿದರು.

ಅತೃಪ್ತ ನಾಲ್ವರು ಶಾಸಕರನ್ನು ಡಿಕೆ ಶಿವಕುಮಾರ್ ಅವರು ಸರ್ಕಾರಿ ನಿವಾಸಕ್ಕೆ ಕರೆದೊಯ್ದಿದ್ದು, ಮಾತುಕತೆ ನಡೆಸುತ್ತಿದ್ದಾರೆ. ಉಳಿದ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದರು.  ಇಂದು ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸರ್ಕಾರಕ್ಕೆ ಏನೂ ಆಗಲ್ಲ ನಡೀರಿ ಎಂದು ವಿಶ್ವಾಸವ್ಯಕ್ತಪಡಿಸಿದರು.

Facebook Comments

Sri Raghav

Admin