ಹಣ ಹಂಚುವುದು ಕಾಂಗ್ರೆಸ್ ಸಂಪ್ರದಾಯ : ಬೊಮ್ಮಾಯಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಅ.22- ಚುನಾವಣೆಗಳಲ್ಲಿ ಹಣ ಹಂಚಿಕೆ ಕಾಂಗ್ರೆಸ್‍ನ ಸಂಪ್ರದಾಯವೇ ಹೊರತು ಬಿಜೆಪಿಯದಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಹಣ ಬಲ ಬಳಕೆ ಮಾಡುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.

ಹಣ ಹಂಚಿಕೆ ಮಾಡುವ ಸಂಪ್ರದಾಯವನ್ನು ಕಾಂಗ್ರೆಸ್ ಎಂದಿನಿಂದಲೂ ಮುಂದುವರೆಸಿಕೊಂಡು ಬಂದಿದ್ದು ನಂಜನಗೂಡು, ಗುಂಡ್ಲುಪೇಟೆ, ಕುಂದಗೋಳಗಳಲ್ಲಿ ತಾನು ಮಾಡಿದ ಮಹತ್ಕಾರ್ಯವನ್ನು ಕಾಂಗ್ರೆಸ್ ಮರೆತಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಿಮ್ಸ್‍ನಲ್ಲಿ ನೂರು ಕೋಟಿ ಲಸಿಕಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ಬಹಳಷ್ಟು ಪಾಠ ಕಲಿಸಿದ್ದು, ದೇಶಾದ್ಯಂತ ನೂರು ಕೋಟಿ ಲಸಿಕೆ ಹಾಕಲಾಗಿದ್ದು ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು.

ಜನತೆ ಮಾನಸಿಕವಾಗಿ ಸನ್ನದ್ಧರಾದಾಗ ಮಾತ್ರ ಕೋವಿಡ್-19ನಂತಹ ವೈರಿ ವೈರಲ್ ಎದುರಿಸಲು ಸಾಧ್ಯ ಎಂದು ಅವರು ನುಡಿದರು. ಕೋವಿಡ್-19 ನಿರ್ವಹಣೆಯಲ್ಲಿ ಖಾಸಗಿ ಕ್ಷೇತ್ರಕ್ಕಿಂತಲೂ ಸರ್ಕಾರಿ ಆಸ್ಪತ್ರೆಗಳ ಸೇವೆಯೇ ಬಹುದೊಡ್ಡದು ಎಂದು ಅವರು ನುಡಿದರು.

ಮೊದಲು ವೈದ್ಯಕೀಯ ಕಿಟ್ ಸೇರಿದಂತೆ ಸೂಕ್ತ ಸಲಕರಣೆಗಳು ದೇಶದಲ್ಲಿ ಲಭ್ಯವಿರಲಿಲ್ಲ. ಈಗ ನಾವೇ ಎಲ್ಲವನ್ನೂ ರಫ್ತು ಮಾಡುವಷ್ಟು ಮುಂದುವರೆದಿದ್ದೇವೆ ಎಂದು ಬೊಮ್ಮಾಯಿ ನುಡಿದರು. ಇದೇ ವೇಳೆ ಕೊರೊನಾ ವಾರಿಯರ್ಸ್‍ಗಳನ್ನು ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೀಶ ಪಾಟೀಲ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook Comments