ಬಿಗ್ ನ್ಯೂಸ್ : ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ‘ಮಹಾ’ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.1- ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಕಗ್ಗಂಟು ತೀವ್ರವಾಗಿರುವಾಗಲೇ ಪರ್ಯಾಯ ಆಡಳಿತ ಸ್ಥಾಪಿಸುವ ಕಸರತ್ತು ಮುಂದುವರಿದಿದೆ.
50:50 ಸೂತ್ರದಂತೆಯೇ ಸರ್ಕಾರ ರಚನೆಯಾಗಬೇಕು. ಮೊದಲಾರ್ಧ ಅವಧಿಗೆ (ಎರಡೂವರೆ ವರ್ಷ) ತಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟನ್ನು ಶಿವಸೇನೆ ಮತ್ತಷ್ಟು ಬಿಗಿಗೊಳಿಸಿದೆ. ಆದರೆ, ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟ ಮಾತುಗಳಲ್ಲಿ ಪುನರುಚ್ಚರಿಸಿದೆ.

ಫಲಿತಾಂಶ ಪ್ರಕಟವಾಗಿ ಒಂದು ವಾರವಾದರೂ ಸರ್ಕಾರ ರಚನೆ ಲಕ್ಷಣ ಗೋಚರಿಸದ ಹಿನ್ನೆಲೆಯಲ್ಲಿ ಶಿವಸೇನೆ ಈಗ ಪರ್ಯಾಯ ಕಾರ್ಯತಂತ್ರ ರೂಪಿಸಿದ್ದು, ಎನ್‍ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಪಡೆಯುವ ಮತ್ತೊಂದು ಆಯ್ಕೆಯನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಶರದ್‍ಪವಾರ್ ನೇತೃತ್ವದ ಎನ್‍ಸಿಪಿ ಸಂಸದರು ಈಗಾಗಲೇ ಶಿವಸೇನೆ ಜತೆ ಸಂಪರ್ಕದಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ ಈಗಾಗಲೇ ಎನ್‍ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಈ ಎರಡೂ ಪಕ್ಷಗಳ ಬೆಂಬಲ ಶಿವಸೇನೆಗೆ ಲಭಿಸುವ ಸಾಧ್ಯತೆಗಳಿವೆ.  288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು 145 ಸದಸ್ಯಬಲದ ಅಗತ್ಯವಿದೆ. ಬಿಜೆಪಿ 105, ಶಿವಸೇನೆ 56, ಎನ್‍ಸಿಪಿ 54, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆಯಾದರೆ 161 ಸ್ಥಾನ ಲಭಿಸಲಿದೆ. ಆದರೆ, ಸರ್ಕಾರ ರಚನೆ ಬಿಕ್ಕಟ್ಟು ಮುಂದುವರಿದಿರುವುದರಿಂದ ಶಿವಸೇನೆ ಎನ್‍ಸಿಪಿ ಮತ್ತು ಕಾಂಗ್ರೆಸ್ ಸಖ್ಯ ಬೆಳೆಸುವ ಪರ್ಯಾಯ ಕಾರ್ಯತಂತ್ರವನ್ನು ಸಹ ಪರಾಮರ್ಶಿಸುತ್ತಿದೆ.

ಈ ಮೂರೂ ಪಕ್ಷಗಳು ಒಗ್ಗೂಡಿದರೆ ಒಟ್ಟು 154 ಸ್ಥಾನಗಳಾಗಲಿವೆ. ಹೀಗಾಗಿ ಈ ಆಯ್ಕೆಯನ್ನು ಸಹ ಪರಿಶೀಲಿಸಲಾಗುತ್ತಿದೆ.  ಈ ಮಧ್ಯೆ ನಿನ್ನೆರಾತ್ರಿ ಕಾಂಗ್ರೆಸ್‍ನ ಪ್ರಭಾವಿ ಶಾಸಕ ಋತುರಾಜ್ ಅವರು ಮುಂಬೈನ ಮಾತೃಶ್ರೀ ನಿವಾಸದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಗೌಪ್ಯ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಇವೆಲ್ಲದರ ನಡುವೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಇಂದು ಮಹಾರಾಷ್ಟ್ರದ ತಮ್ಮ ಪಕ್ಷದ 12 ಪ್ರಭಾವಿ ಮುಖಂಡರನ್ನು ಭೇಟಿ ಮಾಡಿ ಮುಂದಿನ ಕಾರ್ಯತಂತ್ರ ಕುರಿತು ಚರ್ಚೆ ನಡೆಸಿದ್ದಾರೆ. ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್ ಮೊದಲಾದವರ ಜತೆ ಸೋನಿಯಾ ಸಮಾಲೋಚನೆ ನಡೆಸಲಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

Facebook Comments