ಕಾಂಗ್ರೆಸ್‍ನಿಂದಲೂ ಕುಟುಂಬ ರಾಜಕಾರಣಕ್ಕೆ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 13- ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕಾಂಗ್ರೆಸ್ ಒಂದು ಕುಟುಂಬ ಒಂದು ಟಿಕೆಟ್ ಎಂಬ ಕಠಿಣ ನಿರ್ಧಾರ ತೆಗೆದುಕೊಳ್ಳು ಸಾಧ್ಯತೆಗಳು ದಟ್ಟವಾಗಿವೆ. ರಾಜಸ್ಥಾನದ ಉದಯಪುರ್‍ನಲ್ಲಿ ಇಂದಿನಿಂದ ಆರಂಭವಾದ ಮೂರು ದಿನಗಳ ಭೌದ್ಧಿಕ ಮಂಥನ ಶಿಬಿರವಾದ ಚಿಂತನ್ ಶಿವಿರ್ ಪೂರ್ವದಲ್ಲಿ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಮಹತ್ವದ ಸುಳಿವು ನೀಡಿದ್ದಾರೆ.

ಒಂದು ಕುಟುಂಬ ಒಂದು ಟಿಕೆಟ್ ಎಂಬ ನಿಯಮಕ್ಕೆ ಬದ್ಧತೆ ತೋರಿಸಲು ಪ್ಯಾನೆಲ್‍ನಲ್ಲಿರುವ ಎಲ್ಲಾ ನಾಯಕರು ಸರ್ವಾನುಮತದ ಬದ್ಧತೆ ಪ್ರದರ್ಶನ ಮಾಡಿದ್ದಾರೆ. ಶಿಬಿರದ ಬಳಿಕ ಕಾಂಗ್ರೆಸ್ ಸಂಘಟನೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಲಿದೆ ಎಂದಿದ್ದಾರೆ.

ಪಕ್ಷದ ನಾಯಕರ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ಎಂಬ ಕಾರಣಕ್ಕೆ ಯಾವುದೇ ಪೂರ್ವ ಸೇವೆ ಇಲ್ಲದವರಿಗೆ ಟಿಕೆಟ್ ನೀಡದಿರಲು ಪ್ರಸ್ತಾವನೆ ಮಂಡಿಸಲಾಗಿದೆ. ಅದಕ್ಕೆ ಎಲ್ಲರೂ ಆಕ್ಷೇಪ ಇಲ್ಲದೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ಗಿಟ್ಟಿಸಬೇಕು ಎಂದರೆ ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿರುವುದು ಕಡ್ಡಾಯ. ಯಾವುದೇ ವ್ಯಕ್ತಿ ನಿರಂತರವಾಗಿ ಪಕ್ಷದಲ್ಲಿ ಅಧಿಕಾರ ಹೊಂದಿದ್ದರೆ ಅವರು ಕೆಳಗಿಳಿಯಬೇಕು, ಮೂರು ವರ್ಷ ಶೈಥ್ಯಾವ (ಕೂಲಿಂಗ್ ಪಿರಿಯಡ್)ನಲ್ಲಿ ಉಳಿಯಬೇಕು. ನಂತರ ಬೇಕಾದರೆ ಅದೇ ಸ್ಥಾನಕ್ಕೆ ಮರು ಆಯ್ಕೆಯಾಗಬಹುದು ಎಂಬ ನಿರ್ಣಯ ಅಂಗೀಕರಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.

ನವಸಂಕಲ್ಪ ಚಿಂತನ್ ಶಿವಿರ್‍ನಲ್ಲಿ 2024ರ ಲೋಕಸಭೆ ಚುನಾವಣೆಯ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ವಿದ್ವಂಸಕ ರಾಜಕಾರಣದ ಮೂಲಕ ಮತಗಳ ಕ್ರೋಢಿಕರಣಕ್ಕಾಗಿ ಕೋಮುವಾದ ಸೃಷ್ಟಿಸುವುದನ್ನು ಬಲವಾಗಿ ವಿರೋಧಿಸಲಾಗುತ್ತದೆ ಎಂದಿದ್ದಾರೆ.

Facebook Comments