ಗೋಹತ್ಯೆ ನಿಷೇಧ ಕಾನೂನು ವಿರೋಧಿಸಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.9- ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (ಗೋಹತ್ಯೆ ನಿಷೇಧ ಕಾನೂನು) ಅಂಗೀಕಾರದ ವೇಳೆ ಕಾನೂನಿನ ತೊಡಕಾಗಿದೆ ಎಂಬ ಜಿಜ್ಞಾಸೆಯನ್ನು ಮುಂದಿಟ್ಟು ವಿಧಾನಪರಿಷತ್‍ನಲ್ಲಿ ಇಂದೂ ಕೂಡ ಕಾಂಗ್ರೆಸ್ ಹೋರಾಟ ಮುಂದುವರೆಸಿತು. ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದು ಬಸವರಾಜ ಹೊರಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ಇದಕ್ಕೂ ಮೊದಲು ನಡೆದ ವಾದ-ವಿವಾದಗಳು ಗೋಹತ್ಯೆ ನಿಷೇಧ ಮಸೂದೆಯ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಸವಾದವು.

ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ನಾರಾಯಣಸ್ವಾಮಿ ಸೇರಿದಂತೆ ಅನೇಕರು, ನಿನ್ನೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಏಕಾಏಕಿ ವಿಧೇಯಕವನ್ನು ಅಂಗೀಕರಿಸಲಾಗಿದೆ. ನಾವು ವಿಭಜಕ (ಡಿವಿಸನ್)ಮತಕ್ಕೆ ಹಾಕುವಂತೆ ಮನವಿ ಮಾಡಿದರೂ ಅದನ್ನು ಪರಿಗಣಿಸದೆ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾತಿ ಪ್ರಾಣೇಶ್ ಅವರು ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಿನ್ನೆ ವಿಧೇಯಕ ಅಂಗೀಕಾರಗೊಳ್ಳುವ ವೇಳೆ ಕಾಂಗ್ರೆಸ್ ಸದಸ್ಯರು ಬಾವಿಯಲ್ಲಿ ನಿಂತು ಧರಣಿ ನಡೆಸುತ್ತಿದ್ದರು. ಯಾರೂ ಕೂಡ ವಿಭಜನೆಯ ಮತಕ್ಕೆ ಕೇಳಲಿಲ್ಲ ಎಂದು ಹೇಳಿದರು. ಆಗ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು ಬಸವರಾಜ ಬೊಮ್ಮಾಯಿ ವಾದವನ್ನೇ ಬೆಂಬಲಿಸಿದರು.

ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಅವರು, ವಿಭಜನೆ ಮತಕ್ಕೆ ಭೇಡಿಕೆ ಸಲ್ಲಿಸಲಾಗಿತ್ತೋ ಇಲ್ಲವೋ ಎಂಬುದನ್ನು ದಾಖಲೆಗಳನ್ನು ಪರಿಶೀಲಿಸಿ ನೋಡಿ. ನಂತರ ನಿರ್ಧಾರ ಮಾಡೋಣ, ಸದ್ಯಕ್ಕೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕಿದೆ. ನೀವು ಧರಣಿ ಕೈ ಬಿಟ್ಟು ನಿಮ್ಮ ಸ್ಥಾನಕ್ಕೆ ತೆರಳಿ, ಅಜೆಂಡಾ ಪ್ರಕಾರ ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಿಭಜನೆಯ ಮತಕ್ಕೆ ಕೇಳಿರುವ ಬಗ್ಗೆ ವಾದ-ಪ್ರತಿವಾದಗಳು ನಡೆದವು.

ಸರ್ಕಾರದ ಮುಖ್ಯ ಸಚೇತಕ ಮಹಂತೇಶ್ ಕವಟಗಿ ಮಠ ಅವರು, ವೇಳಾಪಟ್ಟಿಯ ಪ್ರಕಾರ ಚುನಾವಣೆ ನಡೆಯಲಿ ಎಂದು ಸಲಹೆ ನೀಡಿದರು. ಈ ಕಲಾಪ ಅಜೆಂಡಾದ ಪ್ರಕಾರವೇ ನಡೆದಿದೆಯೇ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

ನಿನ್ನೆ ನಾವು ವಿಭಜನೆಯ ಮತಕ್ಕೆ ಕೇಳಿರುವುದನ್ನು ಸಿಸಿ ಟಿವಿ ನೋಡಿ ಖಚಿತ ಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಮನವಿ ಮಾಡಿದರು. ಈ ನಡುವೆಯೇ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದಿತ್ತು. ನೂತನ ಸಭಾಪತಿಯವರನ್ನು ಅಭಿನಂದಿಸಲಾಯಿತು. ಅದರ ಬಳಿಕ ಕೂಡ ಕಾಂಗ್ರೆಸ್ ಸದಸ್ಯರು ಧರಣಿಯನ್ನು ಮುಂದುವರೆಸಿದರು.

Facebook Comments