ಬಿಜೆಪಿ ವಿರುದ್ಧ ರಾಜಭವನದ ಎದುರು ಕಾಂಗ್ರೆಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಸ್ಥಾನ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳನ್ನು ಪತನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ರಾಜಭವನದ ಎದುರು ಪ್ರತಿಭಟನೆ ನಡೆಸಿದೆ.

ಅಖಿಲ ಭಾರತ ಕಾಂಗ್ರೆಸ್ ಸೂಚನೆಯ ಮೇರೆಗೆ ದೇಶಾದ್ಯಂತ ರಾಜಭವನಗಳ ಎದುರು ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ.

ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸ್ವತಂತ್ರ ತನಿಖಾ ಸಂಸ್ಥೆಗಳ ಮೂಲಕ ಒಡ್ಡುತ್ತಿರುವ ಬೆದರಿಕೆಗೆ ಜಗ್ಗದೆ ಇದ್ದಾಗ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತ ಪಡಿಸಿದರು.

ರಾಜಸ್ಥಾನದಲ್ಲಿ ಮೊದಲು ಸ್ವತಂತ್ರ ತನಿಖಾ ಸಂಸ್ಥೆಗಳ ಮೂಲಕ ಶಾಸಕರನ್ನು ಬೆದರಿಸಿ ಸರ್ಕಾರ ಪತನಗೊಳಿಸಲು ಪ್ರಯತ್ನಿಸಲಾಯಿತು. ಅದು ಫಲ ನೀಡದೆ ಇದ್ದಾಗ ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರ ಪತನಗೊಳಿಸಲು ಸಂಚು ನಡೆದಿದೆ ಎಂದು ಕಿಡಿಕಾರಿದರು.

ಕರ್ನಾಟಕ, ಮಧ್ಯಪ್ರದೇಶದಲ್ಲಿ ಇದೇ ರೀತಿ ವಾಮಮಾರ್ಗಗಳ ಮೂಲಕ ಸರ್ಕಾರ ಪತನಗೊಳಿಸಲಾಗಿದೆ. ಇಡೀ ದೇಶವೇ ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತ ಸರ್ಕಾರವಾಗಿ ಜನರ ನೆರವಿಗೆ ಧಾವಿಸುವ ಬದಲು ಅಧಿಕಾರ ಲಾಲಸೆಯಿಂದ ಕುದುರೆ ವ್ಯಾಪಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಕೊರೊನಾ ಪೀಡಿತರಿಗೆ ಸರ್ಕಾರದಿಂದ ಯಾವುದೇ ನೆರವು ನೀಡಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲೂ ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿರುವು ಅಮಾನವೀಯ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಹಲವಾರು ಮಂದಿ ಶಾಸಕರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin