ಎತ್ತಿನಗಾಡಿ, ಸೈಕಲ್ ಆಯ್ತು ಈಗ ಟಾಂಗಾದಲ್ಲಿ ಅಧಿವೇಶನಕ್ಕಾಗಮಿಸಿದ ಕಾಂಗ್ರೆಸ್ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.24- ಪೆಟ್ರೋಲ್, ಡೀಸೆಜ್ ಸೇರಿದಂತೆ ತೈಲ ಬೆಲೆ ಏರಿಕೆ ವಿರೋಧಿಸಿ ಮತ್ತೊಮ್ಮೆ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ವಿಧಾನಸಭೆ ಅಧಿವೇಶನಕ್ಕೆ ಟಾಂಗಾ ಗಾಡಿಯಲ್ಲಿ ಆಗಮಿಸಿ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ಕಳೆದ 10 ದಿನಗಳ ಅಧಿವೇಶನದ ಅವಯಲ್ಲಿ ಕಾಂಗ್ರೆಸ್ ಮೂರನೆ ಬಾರಿ ಪ್ರತಿಭಟನೆ ಹಮ್ಮಿಕೊಂಡು ಗರಿಷ್ಠ ಮಟ್ಟದ ವಿರೋಧವನ್ನು ದಾಖಲು ಮಾಡಿದೆ. ಮೊದಲ ದಿನ ಎತ್ತಿನ ಗಾಡಿಯಲ್ಲಿ ಕಾಂಗ್ರೆಸ್ ನಾಯಕರು ಆಗಮಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದವರೆಗೂ ಎತ್ತಿನಗಾಡಿಯಲ್ಲಿ ಆಗಮಿಸುವ ಮೂಲಕ ತೈಲ ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆನಂತರ ಸೈಕಲ್ ತುಳಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್‍ನ ಪ್ರತಿಭಟನೆಗೆ ಬಿಜೆಪಿ ಸರ್ಕಾರ ಕಿಂಚಿತ್ತೂ ಸೊಪ್ಪು ಹಾಕದೇ ಇರುವುದರಿಂದ ಅಧಿವೇಶನದ ಕೊನೆಯ ದಿನವಾದ ಇಂದು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾದಲ್ಲಿ ಆಗಮಿಸಿದರು. ಬೆಳಗ್ಗೆ 9 ಗಂಟೆಯಿಂದಲೇ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಧರಣಿ ಆರಂಭಿಸಿದರು.

10 ಗಂಟೆ ಸುಮಾರಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೂ ಟಾಂಗಾದಲ್ಲಿ ಬಂದರು.

ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆ ಜಾಥಾದಲ್ಲಿ ಆಗಮಿಸಿದರು. ದಾರಿ ಉದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಮೇಲೆ ತೆರಿಗೆ ಏರಿಕೆಯ ಬರೆ ಎಳೆದು ಬಿಜೆಪಿ ಸರ್ಕಾರ ಜನ ವಿರೋ ಧೋರಣೆಯನ್ನು ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ಕನಿಷ್ಠ 30ರೂ. ತೆರಿಗೆ ಕಡಿಮೆ ಮಾಡಬೇಕು. ಅಡುಗೆ ಅನಿಲದ ಮೇಲೆ 300ರೂ. ರಿಯಾಯ್ತಿ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.

ವಿಧಾನಸೌಧದ ಪ್ರವೇಶ ದ್ವಾರದ ಬಳಿ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಟಾಂಗಾ ರ್ಯಾಲಿಯಿಂದಾಗಿ ಕ್ವೀನ್ಸ್ ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ಹೆಚ್ಚಾಗಿ ಜನ ಸಾಮಾನ್ಯರು ಪರದಾಡುವಂತಾಯಿತು.

ಬೆಲೆ ಏರಿಕೆ ವಿರುದ್ಧ ಮೂರನೆ ಬಾರಿ ಪ್ರತಿಭಟನೆ ನಡೆಸಿದರೂ ದಪ್ಪ ಚರ್ಮದ ಸರ್ಕಾರ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Facebook Comments

Sri Raghav

Admin