ಪೌರತ್ವ ಕಾಯ್ದೆ ವಿರೋಧಿಸಿ ರಾಜ್‍ಘಾಟ್‍ನಲ್ಲಿ ಕಾಂಗ್ರೆಸ್ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.23- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಇಂದು ದೆಹಲಿಯ ಮಹಾತ್ಮಗಾಂಧಿ ಸಮಾಧಿ ಇರುವ ರಾಜ್‍ಘಾಟ್‍ನಲ್ಲಿ ಐದು ಗಂಟೆಗಳ ಸತ್ಯಾಗ್ರಹ ನಡೆಸಿತು.  ವಾಸ್ತವವಾಗಿ ನಿನ್ನೆ ಬೆಳಗ್ಗೆ ಕಾಂಗ್ರೆಸ್ ಸತ್ಯಾಗ್ರಹ ನಡೆಸಲು ಉದ್ದೇಶಿಸಿತ್ತಾದರೂ, ರಾಮಲೀಲಾ ಮೈದಾನದಲ್ಲಿ ಭಾನುವಾರವೇ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸತ್ಯಾಗ್ರಹವನ್ನು ಇಂದಿಗೆ ಮುಂದೂಡಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಈ ಸತ್ಯಾಗ್ರಹದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಗುಲಾಂ ನಬಿ ಅಜಾದ್, ಆದೀರ್ ರಂಜನ್ ಚೌಧರಿ, ಆನಂದ ಶರ್ಮ, ಅಹಮದ್ ಪಟೇಲ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮೊದಲಾದ ವಿವಾದಿತ ಮಸೂದೆಗಳ ಮೂಲಕ ಸಂವಿಧಾನದ ನೀತಿಗಳನ್ನು ಉಲ್ಲಂಘಿಸುತ್ತಿದೆ. ಪ್ರಧಾನಿ ನೇತೃತ್ವದ ಆಡಳಿತದ ಏಕಪಕ್ಷೀಯ ನಿರ್ಧಾರಗಳಿಂದ ದೇಶದಲ್ಲಿ ಅಶಾಂತಿ ತಲೆದೋರಿದೆ. ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿದೆ, ರೈತರು, ಕಾರ್ಮಿಕರು ಮತ್ತು ಬಡವರ ಸ್ಥಿತಿ ಶೋಚನೀಯವಾಗಿದೆ. ನಿರುದೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಧರಣಿ ಸತ್ಯಾಗ್ರಹ ಕೈಗೊಂಡಿತು.

ಅತಿಗಣ್ಯ ವ್ಯಕ್ತಿಗಳು ಮತ್ತು ಪಕ್ಷದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ರಾಜ್‍ಘಾಟ್ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿತ್ತು.  ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಟ್ವಿಟ್ ಮಾಡಿದ ರಾಹುಲ್‍ಗಾಂಧಿ ರಾಜ್‍ಘಾಟ್‍ಗೆ ಹೆಚ್ಚು ಸಂಖ್ಯೆಯಲ್ಲಿ ಯುವಕರು ಆಗಮಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕೇಂದ್ರದ ವಿರುದ್ಧ ಶಾಂತಿಯುತ ಹೋರಾಟ ನಡೆಸಬೇಕೆಂದು ಕರೆ ನೀಡಿದ್ದರು.

Facebook Comments