ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‍ನಿಂದ ನಾಳೆ ರಾಜಭವನ ಚಲೋ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಆಯೋಜಿಸಿದೆ. ನಗರದ ಆನಂದ್‍ರಾವ್ ವೃತ್ತದಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದ್ದು , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸುತ್ತಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಲಿದೆ. ಉಳಿದಂತೆ ಮಹಿಳಾ ಕಾಂಗ್ರೆಸ್ ರಾಜ್ಯಾದ್ಯಂತ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ನಾಳೆಯ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರು, 2014ರಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಸರ್ಕಾರ ಕಳೆದ 15 ದಿನಗಳಲ್ಲಿ 15 ರೂ. ದರವನ್ನು ಅಡುಗೆ ಅನಿಲದ ಮೇಲೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಸರ್ಕಾರ ಈಗ ಅದೇ 15 ದಿನದಲ್ಲಿ 50 ರೂ. ಹೆಚ್ಚಳ ಮಾಡಿದೆ.

2014ರಿಂದ ಈವರೆಗೂ 21 ಬಾರಿ ದರ ಹೆಚ್ಚಳ ಮಾಡಿ ಸಬ್ಸಿಡಿ ಸಹಿತವಾಗಿ 410 ರೂ. ಇದ್ದ ಸಿಲಿಂಡರ್ ದರವನ್ನು ಸಬ್ಸಿಡಿ ರಹಿತವಾಗಿ 880 ರೂ.ಗೆ ಹೆಚ್ಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮೊದಲು ಯುಪಿಎ ಅವಧಿಯಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕಿಯರಾದ ಕೇಂದ್ರದ ಸ್ಮೃತಿ ಇರಾನಿ, ರಾಜ್ಯದ ಶೋಭಾ ಕರಂದ್ಲಾಜೆ, ಶಶಿಕಲಾ ಜೊಲ್ಲೆ , ಭಾರತಿ ಶೆಟ್ಟಿ , ತಾರಾ , ಮಾಳವಿಕಾ ಹಾಗೂ ಮತ್ತಿತರರಿಗೆ ಮಹಿಳಾ ಕಾಂಗ್ರೆಸ್‍ನಿಂದ ಪತ್ರ ಬರೆದಿದ್ದು, ನಾಳೆ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

ಬಿಜೆಪಿ ನಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಸರ್ಕಾರ ಕನಿಷ್ಠ 300 ರೂ.ಗಳಷ್ಟು ದರ ಕಡಿಮೆ ಮಾಡಬಹುದು ಎಂಬ ಆಶಾವಾದ ಇದೆ. ಹಾಗಾಗಿ ಜನರ ಹಿತದೃಷ್ಟಿಯಿಂದ ಬಿಜೆಪಿ ನಾಯಕಿಯರು ಕಾಂಗ್ರೆಸ್ ನಡೆಸುವ ಜನಪರವಾದ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಅಧಿಕಾರಕ್ಕೆ ಬಂದ ಹೊಸದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಜಲ ಎಂಬ ಯೋಜನೆಯನ್ನು ಘೋಷಣೆ ಮಾಡಿ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತವಾಗಿ ಸಿಲಿಂಡರ್ ನೀಡಿದರು.

8 ಕೋಟಿ ಕುಟುಂಬಗಳನ್ನು ಹೊಗೆ ರಹಿತ ಮನೆಗಳನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ. ಯೋಜನೆಯಡಿ ಮೊದಲ ಬಾರಿಗೆ ಉಚಿತವಾಗಿ ಸಿಲಿಂಡರ್ ನೀಡಲಾಗುತ್ತಿತ್ತು. ಎರಡನೆ ಬಾರಿಗೆ ದುಡ್ಡು ಕೊಟ್ಟು ಖರೀದಿಸಬೇಕಿದೆ. ಸೌದೆ ಒಲೆಯನ್ನು ಕಿತ್ತು ಹಾಕಿ ಸಿಲಿಂಡರ್‍ಗೆ ಹೊಂದಿಕೊಂಡ ಮಹಿಳೆಯರು ಈಗ ಗೋಳಾಡುವ ಪರಿಸ್ಥಿತಿ ಬಂದಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ದುಡ್ಡು ಕೊಟ್ಟು ಸಿಲಿಂಡರ್ ಖರೀದಿಸುವ ಸಾಮಥ್ರ್ಯವು ಇತ್ತು. ಈಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಅಡುಗೆ ಅನಿಲ , ಪೆಟ್ರೋಲ್ , ಡೀಸೆಲ್, ದಿನ ನಿತ್ಯದ ವಸ್ತುಗಳ ಬೆಲೆಯನ್ನು
ಹೆಚ್ಚಳ ಮಾಡುತ್ತಿರುವುದು ಜನವಿರೋಧಿಯಾಗಿದೆ ಎಂದು ಪುಷ್ಪ ಅಮರನಾಥ್ ಕಿಡಿಕಾರಿದ್ದಾರೆ.

Facebook Comments