ರಾಜ್ಯಕ್ಕಾಗಮಿಸಿದ ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಯ ಸ್ವಾಗತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ. 2- ಪ್ರಧಾನಿ ನರೇಂದ್ರಮೋದಿ ಭೇಟಿಯ ಹಿನ್ನೆಲೆಯ ಕಾಂಗ್ರೆಸ್ ಈ ಹಿಂದೆ ನೀಡಿದ್ದ ಭರವಸೆಗಳನ್ನು ಆಧಾರಿಸಿ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದು ಉತ್ತರ ನೀಡುವಂತೆ ಆಗ್ರಹಿಸಿದೆ. ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಲಿಂಗೈಕ್ಯರಾಗಿದ್ದ ತುಮಕೂರಿಗೆ ಏಕೆ ಬರಲಿಲ್ಲ? ಶ್ರೀಗಳಿಗೆ ಭಾರತರತ್ನ ಈವರೆಗೆ ಏಕೆ ಪ್ರಕಟಿಸಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನು ಆರಂಭಿಸಿರುವ ಕಾಂಗ್ರೆಸ್, ಭೀಕರ ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಪ್ರಶ್ನೆಸಿದೆ.

ಒಂದು ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದ್ದು ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿಲ್ಲ, 35 ಸಾವಿರ ಕೋಟಿ ನಷ್ಟ ಎಂದು ಸರ್ಕಾರ ವರದಿ ನೀಡಿದ್ದರೂ ಕೇವಲ 1200 ಕೋಟಿ ರೂ. ಪರಿಹಾರ ನೀಡಿ ಸುಮ್ಮನಾಗಿದ್ದೇಕೆ? ಜಿಎಸ್‍ಟಿಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಸಮರ್ಪಕ ಪಾಲನ್ನು ನೀಡದೆ ಇರುವುದೇಕೆ? ಉದ್ಯೋಗ ಖಾತ್ರಿ ಯೋಜನೆಯ ಬಾಕಿಯನ್ನು ಏಕೆ ಪಾವತಿಸಲ್ಲ? ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಾಣಿಸಿರುವುದೇಕೆ ಎಂದು ಪ್ರಶ್ನಿಸಿದೆ.

ಗಡಿ ವಿವಾದದಲ್ಲಿ ಮಹಾರಾಷ್ಟ್ರ, ಕರ್ನಾಟಕದ ಬಿಜೆಪಿ ನಾಯಕರು ತದ್ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದೇಕೆ? ಉಭಯ ರಾಜ್ಯಗಳ ನಡುವೆ ಶಾಂತಿ ಸ್ಥಾಪಿಸಬೇಕಾದ ಕೇಂದ್ರ ಸರ್ಕಾರ ತದ್ವಿರುದ್ಧವಾದ ಹೇಳಿಕೆಗಳು ಹೊರಬರುತ್ತಿರುವುದು ಮೌನವಾಗಿರುವುದೇಕೆ? ಭಾರತದ ಸಂವಿಧಾನದಲ್ಲಿ ಯಾವ ಭಾಷೆಯೂ ರಾಷ್ಟ್ರಭಾಷೆಯಲ್ಲ ಹಾಗಿದ್ದರೂ ಸಂವಿಧಾನದ 8ನೆ ಪರಿಚ್ಛೇದದಲ್ಲಿನ ಎಲ್ಲಾ ಭಾಷೆಗಳಿಗೂ ಅಧಿಕೃತ, ಸಮಾನ ಸ್ಥಾನಮಾನ ನೀಡದೆ ಇರುವುದೇಕೆ? ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಹಿಂದಿಯನ್ನು ಹೇರುತ್ತಿರುವುದೇಕೆ ಎಂದು ಕಿಡಿ ಕಾರಲಾಗಿದೆ.

ಈ ಹಿಂದೆ ತುಮಕೂರಿಗೆ ಭೇಟಿ ನೀಡಿದಾಗ ಹೇಮಾವತಿ- ನೇತ್ರಾವತಿ ನದಿಗಳನ್ನ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರೂ ಆ ಯೋಜನೆ ಯಾವ ಹಂತದಲ್ಲಿದೆ? ಆಗಿರುವ ಖರ್ಚು- ವೆಚ್ಚಗಳೆಷ್ಟು? ಯೋಜನೆ ಪೂರ್ಣಗೊಳ್ಳುವುದು ಯಾವಾಗ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಉತ್ತರ ಕೊಡಿ ಮೋದಿಯವರೇ ಎಂದು ಆಗ್ರಹಿಸಿದೆ.

ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಫುಡ್‍ಪಾರ್ಕ್ ಸ್ಥಾಪನೆಯಾಗಿ 6 ವರ್ಷ ಕಳೆದಿದೆ, 10 ಸಾವಿರ ನೇರ , 25 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಯಾಗಿಲ್ಲ ಏಕೆ? 12 ಜಿಲ್ಲೆಗಳ ರೈತರ ಹೆಸರಿನಲ್ಲಿ ಉತ್ತರ ಭಾರತದ ಮಾಲೀಕನಿಗೆ ಲಾಭ ಮಾಡಿಕೊಡುವುದು ನಿಮ್ಮ ಉದ್ದೇಶವಾಗಿತ್ತೆ? ಗುಬ್ಬಿ ತಾಲ್ಲೂಕಿನ ಬಿದರಹಳ್ಳ ಕಾವಲ್‍ನಲ್ಲಿ ಎಚ್‍ಎಎಲ್ ಲಘು ಯುದ್ಧ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು, ಅದರಲ್ಲಿ ಭಾಗವಹಿಸಿದ್ದ ಮೋದಿ ಅವರು 2018ರ ಅಂತ್ಯಕ್ಕೆ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದು ಹೇಳಿದ್ದರೂ, ಮೂರು ವರ್ಷ ಕಳೆದರೂ ಒಂದು ಹೆಲಿಕಾಪ್ಟರ್ ತಯಾರಾಗಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನೆಗಳನ್ನು ಮುಂದಿಟ್ಟಿದೆ.

ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ, ಆತ್ಮಹತ್ಯೆ ತಡೆಯುವುದಾಗಿ ಭರವಸೆ ನೀಡಿದ್ದರು. ಕರ್ನಾಟಕದಲ್ಲೇ 8 ತಿಂಗಳಲ್ಲಿ 453 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೇಂದ್ರ ಸರ್ಕಾರ ರೈತರಿಗಾಗಿ ಯಾವುದೇ ಕ್ರಮಕೈಗೊಂಡಿಲ್ಲ, ಅಚ್ಚೇ ದಿನ್ ಎಲ್ಲಿ? ವಿಕಾಸ್ ಎಲ್ಲಿ? ಕಪ್ಪು ಹಣ ಎಲ್ಲಿ? ಉದ್ಯೋಗ ಸೃಷ್ಟಿ ಎಲ್ಲಿ? ಮಹಿಳಾ ಸಬಲೀಕರಣ ಎಲ್ಲಿ ಎಂದು ಕಾಂಗ್ರೆಸ್ ನಿರಂತರ ಪ್ರಶ್ನೆಗಳನ್ನು ಕೇಳಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಇದೇ ರೀತಿಯ ಪ್ರಶ್ನೆಗಳನ್ನು ಮೋದಿಯವರ ಮುಂದಿಟ್ಟಿದ್ದಾರೆ.

Facebook Comments

Sri Raghav

Admin