ಮಕಾಡೆ ಮಲಗಿದ ‘ಶಕ್ತಿ ಯೋಜನೆ’, ಮತ್ತೆ ಅಖಾಡಕ್ಕಿಳಿದ ನಾಯಕರು..!

ಈ ಸುದ್ದಿಯನ್ನು ಶೇರ್ ಮಾಡಿ

Shakti-yonana--01
ಬೆಂಗಳೂರು, ಡಿ.2- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಶಕ್ತಿ ಯೋಜನೆ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯದರ್ಶಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಸದಸ್ಯರು, ಕಾರ್ಯಕರ್ತರ ನೋಂದಣಿ ಮಾಡಲು ಈ ಯೋಜನೆಯನ್ನು ರೂಪಿಸಲಾಗಿತ್ತು. ವಾಟ್ಸಪ್ ಮೂಲಕ ಯಾರು ಬೇಕಾದರೂ ಕಾಂಗ್ರೆಸ್ ಸದಸ್ಯತ್ವ ಪಡೆಯಬಹುದಿತ್ತು. ಉಸ್ತುವಾರಿ ಕಾರ್ಯದರ್ಶಿಗಳ ನಿರುತ್ಸಾಹದಿಂದ ಈ ಯೋಜನೆ ವಿಫಲವಾಗಿದ್ದು, ಮತ್ತೆ ಈ ಯೋಜನೆಗೆ ಶಕ್ತಿ ತುಂಬಲು ನಾಯಕರುಗಳು ಡಿ.15ರ ವರೆಗೆ ಸಮಯವನ್ನು ವಿಸ್ತರಿಸಿದ್ದಾರೆ.

ಬಹಳ ನಿರೀಕ್ಷೆ ಇಟ್ಟುಕೊಂಡು ರಾಹುಲ್‍ಗಾಂಧಿ ಅವರು ಜುಲೈನಲ್ಲಿ ನವದೆಹಲಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಬೆಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಚಿದಂಬರಂ ಚಾಲನೆ ನೀಡಿದ್ದರು. ಅತಿ ಚಿಕ್ಕ ರಾಜ್ಯವಾಗಿರುವ ಛತ್ತೀಸ್‍ಗಢದಲ್ಲಿ ಶಕ್ತಿ ಯೋಜನೆ ಮೂಲಕ 6 ಲಕ್ಷ, ರಾಜಸ್ಥಾನದಲ್ಲಿ 7 ಲಕ್ಷ, ಮಧ್ಯ ಪ್ರದೇಶದಲ್ಲಿ 6 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದೆ. ಆದರೆ, ಆರೂವರೆ ಕೋಟಿ ಜನಸಂಖ್ಯೆ ಇರುವ ನಮ್ಮ ರಾಜ್ಯದಲ್ಲಿ ಅದರಲ್ಲೂ ಆಡಳಿತದ ಭಾಗವಾಗಿರುವ ಕಾಂಗ್ರೆಸ್ ಪಕ್ಷ 3 ಲಕ್ಷ ಸದಸ್ಯರನ್ನು ನೋಂದಣಿ ಮಾಡಲು ಸುಸ್ತಾಗಿದೆ.

ಶಾಸಕರು, ಸಚಿವರು, ಸಚಿವ ಸ್ಥಾನದ ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲೇ ಕಳಪೆ ಸಾಧನೆಯಾಗಿದೆ. ಕರ್ನಾಟಕದಲ್ಲಿ ಕನಿಷ್ಟ 10 ಲಕ್ಷ ಸದಸ್ಯರನ್ನು ನೋಂದಣಿ ಮಾಡಿ ನಂತರ ಸಚಿವ ಸ್ಥಾನ, ನಿಗಮ-ಮಂಡಳಿ ಸ್ಥಾನ ಕೇಳಿ ಎಂದು ಹೈಕಮಾಂಡ್ ನಾಯಕರು ತಾಕೀತು ಮಾಡಿದ್ದಾರೆ. ಸಚಿವ ಸ್ಥಾನ ಕೇಳಲು ಸದಸ್ಯತ್ವ ನೋಂದಣಿ ಅಭಿಯಾನದ ಫಲಿತಾಂಶ ತೋರಿಸಬೇಕಾದ ಸಂಕಷ್ಟದಲ್ಲಿ ಶಾಸಕರಿದ್ದಾರೆ. ವಾಟ್ಸಾಪ್ ಮೂಲಕ ಯಾರು ಬೇಕಾದರೂ ಕಾಂಗ್ರೆಸ್ ಸದಸ್ಯತ್ವ ಪಡೆಯಬಹುದಿತ್ತು. 7045006100 ನಂಬರ್‍ಗೆ ತಮ್ಮ ವೋಟರ್ ಐಡಿ ಮೆಸೇಜ್ ಮಾಡಿದರೆ ಸಾಕು. ನೋಂದಣಿ ಹಾಗೂ ಈ ಕಾರ್ಯಕ್ರಮ ರಾಜ್ಯ ನಾಯಕರ ನಿರುತ್ಸಾಹದಿಂದ ಮೂಲೆಗೆ ಸೇರುವಂತೆ ಆಗಿದೆ.

ಕಾರ್ಯಕ್ರಮದ ಆರಂಭದಲ್ಲಿ ನವೆಂಬರ್ ತಿಂಗಳ ಕೊನೆಯವರೆಗೆ ಅವಧಿ ನೀಡಲಾಗಿತ್ತು. ಆದರೆ, ವಿಫಲವಾದ ಹಿನ್ನೆಲೆಯಲ್ಲಿ ಗರಂ ಆಗಿರುವ ಕೆಪಿಸಿಸಿ ಅಧ್ಯಕ್ಷರು, ಹೈಕಮಾಂಡ್, ಮುಖಂಡರು ಸದಸ್ಯತ್ವ ನೋಂದಣಿ ಅಭಿಯಾನ ವಿಸ್ತರಿಸಿದ್ದಾರೆ. ಕೇವಲ ಅಧಿಕಾರ ಕೇಳಿದರೆ ಸಾಲದು, ಪಕ್ಷ ಸಂಘಟನೆಗೂ ಮುಂದಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸದಸ್ಯತ್ವ ನೋಂದಣಿ ಮೂಲಕ ಯುವಕರನ್ನು ಪಕ್ಷದತ್ತ ಸೆಳೆಯಲು ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆಸಕ್ತಿಯಿಂದ ಈ ಯೋಜನೆಯನ್ನು ಅಷ್ಟಾಗಿ ಅನುಷ್ಠಾನಕ್ಕೆ ತಂದಂತೆ ಕಂಡುಬರಲಿಲ್ಲ. ಸಮರ್ಪಕವಾಗಿ ಜಾರಿಯಾಗಿದ್ದರೆ ಲಕ್ಷಾಂತರ ಕಾರ್ಯಕರ್ತರು ಸದಸ್ಯರಾಗಬಹುದಿತ್ತು.ಪಕ್ಷದಿಂದ 15 ಜನ ಸಚಿವರಿದ್ದರೂ ಅವರ ಕ್ಷೇತ್ರಗಳಲ್ಲೂ ಕೂಡ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಅಲ್ಲದೆ, ಸಚಿವಾಕಾಂಕ್ಷಿಗಳಾಗಿರುವ ಕ್ಷೇತ್ರಗಳಲ್ಲೂ ಕೂಡ ಯೋಜನೆ ಜಾರಿಯಾಗದಿರುವುದು ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಎಲ್ಲ 224 ಕ್ಷೇತ್ರಗಳ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು ವಾಟ್ಸಪ್ ಮೂಲಕ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕಿತ್ತು. 224 ಕ್ಷೇತ್ರಗಳನ್ನು ಅವಲೋಕಿಸಿದರೆ ಶೇ.100ರಷ್ಟು ಗಡಿ ದಾಟಿರುವುದು ಬೆರಳೆಣಿಕೆ ಕ್ಷೇತ್ರಗಳು ಮಾತ್ರ. ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಹಾನಗಲ್, ಬೆಂಗಳೂರಿನ ಯಶವಂತಪುರ ಮಾತ್ರ. ಈ ಮೂರು ಕ್ಷೇತ್ರಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ದೇವರ ಹಿಪ್ಪರಗಿಯಲ್ಲಿ ಶೇ.72, ಬಸವನಬಾಗೇವಾಡಿಯಲ್ಲಿ ಶೇ.81, ಶಿರಹಟ್ಟಿ ಶೇ.76, ಗದಗ ಶೇ.98, ರೋಣ ಶೇ.94, ನರಗುಂದ ಶೇ.81, ನವಲಗುಂದ ಶೇ.93, ಕುಂದಗಲ್ ಶೇ.92, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶೇ.93, ಕಲಘಟಗಿ ಶೇ.97, ಹಾವೇರಿ ಶೇ.89, ರಾಣೆಬೆನ್ನೂರು ಶೇ.89ರಷ್ಟು ಗುರಿ ಸಾಧಿಸಲಾಗಿದೆ.

ಬೆಂಗಳೂರಿನ ಸಿವಿ ರಾಮನ್‍ನಗರ, ಶೇ.67, ಶಿವಾಜಿನಗರ ಶೇ.74, ಶಾಂತಿನಗರ ಶೇ.79, ಗಾಂಧಿನಗರ ಶೇ.97, ರಾಜಾಜಿನಗರ ಶೇ.84, ಗೋವಿಂದರಾಜನಗರ ಶೇ.86, ವಿಜಯನಗರ ಶೇ.89, ಚಾಮರಾಜಪೇಟೆ ಶೇ.86, ಚಿಕ್ಕಪೇಟೆ ಶೇ.94, ಬಸವನಗುಡಿ ಶೇ.94, ಪದ್ಮನಾಭನಗರ ಶೇ.62, ದೇವನಹಳ್ಳಿ ಶೇ.91, ಆನೇಕಲ್ ಶೇ.43, ಮಹದೇವಪುರ ಶೇ.41 ಪ್ರಗತಿ ಸಾಧಿಸಿದರೆ, ಮಂಡ್ಯದ ಮದ್ದೂರು ಕೇವಲ ಶೇ.28ರಷ್ಟು ಸದಸ್ಯತ್ವ ನೋಂದಣಿ ಆಗಿದೆ.

ಇನ್ನು ಅರಸೀಕೆರೆಯಲ್ಲಿ ಶೇ.12, ಬೇಲೂರಿನಲ್ಲಿ ಶೇ.8, ಹೊಳೆನರಸೀಪುರ ಶೇ.12, ಅರಕಲಗೂಡು ಶೇ.10, ಸಕಲೇಶಪುರ ಶೇ.18, ಬೆಳ್ತಂಗಡಿ ಶೇ.33, ಮಡಿಕೇರಿ ಶೇ.22, ಟಿ.ನರಸೀಪುರ ಶೇ.47, ಹನೂರು ಶೇ.31, ಕೊಳ್ಳೇಗಾಲ ಶೇ.33, ಚಾಮರಾಜನಗರ ಶೇ.30ರಷ್ಟು ಈ ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗಿದೆ.
ನ.30ರ ವರೆಗೆ ಈ ಯೋಜನೆಗೆ ಡೆಡ್‍ಲೈನ್ ನೀಡಲಾಗಿತ್ತು. ಶಕ್ತಿ ಯೋಜನೆ ಮೂಲಕ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ನೇಮಿಸುವ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ನಿರೀಕ್ಷಿತ ಸಾಧನೆ ಆಗದಿರುವುದು ನಾಯಕರಲ್ಲಿ ನಿರುತ್ಸಾಹ ಮೂಡಿಸಿದೆ. ಹಾಗಾಗಿ ಡಿ.15ರ ವರೆಗೆ ಮತ್ತೆ ಗಡುವು ನೀಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin