ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಜೆಡಿಎಸ್, ಬಿಜೆಪಿ ಮಂಡಿಸಿರುವ ಅವಿಶ್ವಾಸ, ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ರಾಜೀನಾಮೆ ನೀಡಲು ಮುಂದಾಗಿರುವುದರ ನಡುವೆಯೂ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಸಭಾಪತಿ ಸ್ಥಾನದಲ್ಲಿ ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಮುಂದುವರಿಸಲು ಮುಂದಾಗಿದೆ. ಸಭಾಪತಿ ಅವರ ವಿರುದ್ಧ ಜೆಡಿಎಸ್, ಬಿಜೆಪಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಫೆಬ್ರವರಿ 1ಕ್ಕೆ ಕೊನೆಗೊಳ್ಳಲಿದೆ.

ಈ ಸಂಬಂಧ ಫೆಬ್ರವರಿ 1ರಿಂದ ಅವಿಶ್ವಾಸ ನಿರ್ಣಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ, ಇದಕ್ಕೂ ಮುನ್ನ ಪ್ರತಾಪ್‍ಚಂದ್ರಶೆಟ್ಟಿ ಅವರು ರಾಜೀನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ರಾಜೀನಾಮೆ ಸಲ್ಲಿಸಬೇಕಾದರೆ ರಾಜ್ಯಪಾಲರಿಗೆ ಅಥವಾ ಉಪಸಭಾಪತಿ ಅವರಿಗೆ ಸಲ್ಲಿಸಬೇಕು. ನಾಳೆ ಉಪಸಭಾಪತಿ ಅವರ ಚುನಾವಣೆ ನಡೆಯಲಿದೆ. ಯಾರು ಉಪಸಭಾಪತಿಯಾಗುತ್ತಾರೆ ಅವರಿಗೆ ಸಭಾಪತಿ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿ ತೆರಳಲು ಮುಂದಾಗಿದ್ದಾರೆ.

ಆದರೆ, ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಬೇಡ ಎಂದು ಹಲವು ತಾಂತ್ರಿಕ ಕಾರಣಗಳನ್ನು ಹುಡುಕಿ ಅದೇ ಸ್ಥಾನದಲ್ಲಿ ಮುಂದುವರಿಸುವ ಪ್ರಯತ್ನ ನಡೆಸಿದೆ. ಕಳೆದ ಡಿ.5ರಂದು ಮೇಲ್ಮನೆಯಲ್ಲಿ ಅವಿಶ್ವಾಸ ಸಂಬಂಧ ನಡೆದ ಸಂದರ್ಭದ ಕಹಿ ಘಟನೆಯ ಬಗ್ಗೆ ಸಭಾಪತಿ ಅವರು ಸದನ ಸಮಿತಿ ರಚಿಸಿದ್ದರು.

ಕಾಂಗ್ರೆಸ್‍ನಿಂದ ಇಬ್ಬರು, ಬಿಜೆಪಿ ಇಬ್ಬರು ಹಾಗೂ ಜೆಡಿಎಸ್‍ನ ಒಬ್ಬರು ಸೇರಿದಂತೆ ಐವರ ಸದನ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಅಂದು ಶತಮಾನಗಳ ಇತಿಹಾಸವಿರುವ ವಿಧಾನ ಪರಿಷತ್‍ನಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಸಭಾಪತಿ ಅವಿಶ್ವಾಸ ನಿರ್ಣಯ ಸಂಬಂಧ ಸಭಾಪತಿ ಸ್ಥಾನದಲ್ಲಿ ಉಪಸಭಾಪತಿ ಕುಳಿತಿದ್ದು, ಅವರನ್ನು ಎಳೆದಾಡಿದ್ದು, ಸದಸ್ಯರ ನಡುವೆ ತಳ್ಳಾಟ-ನೂಕಾಟ, ಸಭಾಪತಿಯವರು ಸದನಕ್ಕೆ ಬರದಂತೆ ತಡೆದದ್ದು ಸೇರಿದಂತೆ ಹಲವು ಕಹಿ ಘಟನೆಗಳು ನಡೆದಿದ್ದವು.

ಈ ಎಲ್ಲ ಘಟನೆಗಳ ಬಗ್ಗೆ ವರದಿ ನೀಡುವಂತೆ ರಚಿಸಿದ್ದ ಸದನ ಸಮಿತಿಯಲ್ಲಿ ಇದ್ದ ಇಬ್ಬರು ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದರು. ಇನ್ನುಳಿದ ಕಾಂಗ್ರೆಸ್‍ನ ಇಬ್ಬರು ಹಾಗೂ ಜೆಡಿಎಸ್‍ನ ಒಬ್ಬರು ಸೇರಿದಂತೆ ಮೂವರು ಸದಸ್ಯರ ಸಮಿತಿ ಸಭಾಪತಿಗಳಿಗೆ ಮಧ್ಯಂತರ ವರದಿ ನೀಡಿರುವುದಲ್ಲದೆ ಸಂಪೂರ್ಣ ವರದಿ ನೀಡಲು ಮೂರು ತಿಂಗಳ ಕಾಲಾವಕಾಶ ಕೇಳಿದೆ.

ಈ ವರದಿ ಸದನದಲ್ಲಿ ಮಂಡನೆಯಾಗಬೇಕು. ಮಂಡನೆಯಾದರೆ ಇದು ಸದನದ ಆಸ್ತಿಯಾಗಲಿದೆ. ಮಧ್ಯಂತರ ವರದಿ ಮೇಲೆ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಸಂಪೂರ್ಣ ವರದಿ ನೀಡಲು ಕಾಲಾವಕಾಶ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಸಭಾಧ್ಯಕ್ಷ ಸ್ಥಾನದಲ್ಲಿ ತಾವು ಮುಂದುವರಿಯಬಹುದಾಗಿದೆ ಎಂಬುದು ಕಾಂಗ್ರೆಸ್‍ನ ತಾಂತ್ರಿಕ ನಿಲುವಾಗಿದೆ.

ತಮ್ಮ ಘನ ಹುದ್ದೆಗೆ ಅನಗತ್ಯ ಧಕ್ಕೆ ತಂದ ಘಟನೆಯ ಸಂಪೂರ್ಣ ವರದಿ ಬರುವವರೆಗೆ ತಾವು ಹುದ್ದೆಯಲ್ಲಿ ಮುಂದುವರಿಯಬೇಕು. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂಬುದು ಕಾಂಗ್ರೆಸ್‍ನ ಅಚಲ ನಿರ್ಧಾರವಾಗಿದೆ.

ಆದರೆ, ಹಾಲಿ ಸಭಾಪತಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಉಪಸಭಾಪತಿ ಚುನಾವಣೆ ನಂತರ ರಾಜೀನಾಮೆ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸಭಾಪತಿ, ಉಪಸಭಾಪತಿ ಅಧಿಕಾರ ಹಂಚಿಕೆ ಮಾಡಿಕೊಂಡಿರಲಿಲ್ಲವೆ? ಈಗ ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿದೆ. ಜಾತ್ಯತೀತತೆಯ ಬಣ್ಣ ಬಹಿರಂಗವಾಗಬೇಕು ಎಂದು ಕಾಂಗ್ರೆಸ್ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಅಧಿಕಾರ ರಾಜಕಾರಣಕ್ಕೆ ಬಹುಮತ ಬಹಳ ಮುಖ್ಯವಾಗಿರುತ್ತದೆ.

Facebook Comments