ಬಿಜೆಪಿಯಲ್ಲಿ ಅಸಮಾಧಾನದ ಹೊಗೆ, ಕಾಂಗ್ರೆಸ್ ಕಾದು ನೋಡುವ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ಬಿಜೆಪಿ ವಲಯದಲ್ಲಿ ನಡೆಯುತ್ತಿರುವ ಆಂತರಿಕ ರಹಸ್ಯ ಸಭೆಗಳ ಪರಿಣಾಮಗಳನ್ನು ಕಾದುನೋಡುವ ನಿರ್ಧಾರಕ್ಕೆ ಕಾಂಗ್ರೆಸ್ ಮುಂದಾಗಿದೆ. ಸದ್ಯಕ್ಕೆ ಬಿಜೆಪಿ ವಲಯದ ರಹಸ್ಯ ಸಭೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

ಮೇಲ್ನೋಟಕ್ಕೆ ಯಾವುದೇ ಆತಂಕ ಇಲ್ಲ ಎಂದು ಹೇಳಲಾಗುತ್ತಿದೆಯಾದರೂ ಒಳಗೊಳಗೆ ಹೊತ್ತಿಕೊಂಡಿರುವ ಸಣ್ಣ ಕಿಡಿ ಮುಂದೆ ಜ್ವಾಲಾಮುಖಿಯಾದರೂ ಆಗಬಹುದು ಎಂಬ ನಿರೀಕ್ಷೆಯನ್ನು ವಿಪಕ್ಷ ಕಾಂಗ್ರೆಸ್ ಹೊಂದಿದೆ.

ಈ ಮೊದಲು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ರೀತಿಯ ಸಭೆಗಳು ಆರಂಭಗೊಂಡಿದ್ದವು. ಆರಂಭದಲ್ಲಿ ವೈಯಕ್ತಿಕ ಬೇಡಿಕೆಯ ಈಡೇರಿಕೆಗೆ ನಡೆಯುವ ಚರ್ಚಾ ಕೂಟಗಳೆಂದು ನಿರ್ಲಕ್ಷಿಸಲಾಗಿತ್ತು. ಆದರೆ, ಕಾಲ ಕ್ರಮೇಣ ಅವು ಬಂಡಾಯ ಚಟುವಟಿಕೆಗಳಾಗಿ ಪರಿವರ್ತನೆಗೊಂಡು ಸರ್ಕಾರದ ಪತನಕ್ಕೆ ಕಾರಣವಾದವು.

ಅದೇ ರೀತಿಯ ಬೆಳವಣಿಗೆಗಳು ಈಗ ಬಿಜೆಪಿಯಲ್ಲೂ ಶುರುವಾಗಿವೆ. ಜೆಡಿಎಸ್-ಕಾಂಗ್ರೆಸ್‍ನ ಬಂಡಾಯ ಶಾಸಕರು ಭಿನ್ನಮತೀಯ ಸಭೆಗಳನ್ನು ನಡೆಸುವಾಗ ಪ್ರತಿ ಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಕಾದು ನೋಡುವ ತಂತ್ರಗಾರಿಕೆ ಅನುಸರಿಸಿತ್ತು.

ನಾವು ಸನ್ಯಾಸಿಗಳಲ್ಲ. ಅವಕಾಶ ಬಂದರೆ ಸರ್ಕಾರ ರಚಿಸಲು ಹಿಂದೇಟು ಹಾಕುವುದಿಲ್ಲ ಎಂದು ಹೇಳುತ್ತಾ ಬಂದಿದ್ದರು.
ನಿರೀಕ್ಷೆಯಂತೆ ಅವರಿಗೆ ಅವಕಾಶಗಳು ಬಂದವು. ಸರ್ಕಾರವೂ ರಚನೆಯಾಯಿತು. ಆದರೆ, ಈಗ ಕಾಂಗ್ರೆಸ್‍ನಲ್ಲಿ ಅವಕಾಶ ಬಂದರೂ ಸರ್ಕಾರ ರಚಿಸಲು ಸಿದ್ದ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ.

ಏಕೆಂದರೆ ಕಾಂಗ್ರೆಸ್‍ನಲ್ಲಿ ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚಿಸಲಂತೂ ಸಾಧ್ಯವಿಲ್ಲ. ಜೆಡಿಎಸ್ ಬೆಂಬಲ ಬೇಕೇಬೇಕು.

ಬಿಜೆಪಿಯಲ್ಲಿ ಪ್ರತ್ಯೇಕ ಸಭೆಗಳಲ್ಲಿ ಭಾಗವಹಿಸುತ್ತಿರುವ ಶಾಸಕರು ಆರ್‍ಎಸ್‍ಎಸ್‍ನ ಕಟ್ಟಾ ಅನುಯಾಯಿಗಳು. ಜೆಡಿಎಸ್-ಕಾಂಗ್ರೆಸ್‍ನಂತೆ ಅಧಿಕಾರಿಕ್ಕಾಗಿ  ಸಿದ್ದಾಂತ ಬದಲಿಸಿಕೊಳ್ಳುವ ಜಾಣತನ ಅವರಲ್ಲಿ ಇಲ್ಲ.

ಒಂದು ವೇಳೆ ಬಿಜೆಪಿ ಅಥವಾ ಯಡಿಯೂರಪ್ಪ  ಅವರ ಮೇಲಿನ ಸಿಟ್ಟಿಗಾಗಿ ಅವರು ಪಕ್ಷ ತೊರೆದರೂ ಕೂಡ ಅವರನ್ನು ನಂಬಿಕೊಂಡು ಸರ್ಕಾರ ರಚನೆಯಂತಹ ಪ್ರಯತ್ನಕ್ಕೆ ಕೈ ಹಾಕಲು ಯಾವ ನಾಯಕರೂ ಸಿದ್ದರಿಲ್ಲ.  ಆದರೆ, ರಾಜಕೀಯ ಸ್ಥಿತ್ಯಂತ್ರಗಳಲ್ಲಿ ಬಿಜೆಪಿಯ ನಾಯಕತ್ವ ಬದಲಾಗಬಹುದು.

ಅಥವಾ ಬಂಡಾಯವೆದ್ದ ಶಾಸಕರಿಗೆ ಲಾಭವಾಗಬಹುದು, ವಿಧಾನಸಭೆ ವಿಸರ್ಜನೆಯಾಗಿ ಅಕಾಲಿಕ ಚುನಾವಣೆ ಎದುರಾಗಬಹುದು. ಈ ಎಲ್ಲಾ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ಚರ್ಚೆ ನಡೆಸಲು ಸಭೆ ನಡೆಸಲು ಮುಂದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಬೆಳವಣಿಗೆಗಳಿಂದ ಕಾಂಗ್ರೆಸ್‍ಗೆ ಲಾಭವಾಗಲಿದೆ ಎಂಬ ನಿರೀಕ್ಷೆ ಪಕ್ಷದಲ್ಲಂತೂ ಇಲ್ಲ. ಹಾಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

Facebook Comments