ಪ್ರಸನ್ನಕುಮಾರ್ ಎಂಟ್ರಿ, ಅಖಂಡ ಶ್ರೀನಿವಾಸಮೂರ್ತಿಗೆ ತಪ್ಪುತ್ತಾ ಕೈ ಟಿಕೆಟ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.28- ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸಲು ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲವೆ? ಈ ಒಂದು ಚರ್ಚೆ ಪಕ್ಷದ ಒಳ ವಲಯದಲ್ಲಿ ತೀವ್ರಗೊಂಡಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಜೆಡಿಎಸ್‍ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರು ತಮ್ಮ ಆಪ್ತರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಸಲಾಗಿದೆ.

ಪ್ರಸನ್ನಕುಮಾರ್ ಅವರ ಪ್ರಕಾರ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ನೀಡದೆ ಇರುವುದು ಶೇ.200ರಷ್ಟು ಖಾತ್ರಿಯಾಗಿದೆ. ದೂರವಾಣಿಯಲ್ಲಿ ಮಾತನಾಡಿರುವ ಕಾರ್ಯಕರ್ತರೊಬ್ಬರು ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಸಿಗಲಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಚುನಾವಣೆ ಇನ್ನೂ ದೂರ ಇದೆ. ಟಿಕೆಟ್‍ನ ಮಾತು ಆಮೇಲೆ.

ಮೊದಲು ಪಕ್ಷದ ಒಳಗೆ ಬರಬೇಕು ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.  ತಮಗೆ ಟಿಕೆಟ್ ನೀಡುವುದು ಅಥವಾ ಬಿಡುವ ಬಗ್ಗೆ ನಿಧಾನವಾಗಿ ಚರ್ಚೆ ಮಾಡೋಣ. ಆದರೆ, ನನಗಿರುವ ಮಾಹಿತಿ ಪ್ರಕಾರ ಅಖಂಡ ಶ್ರೀನಿವಾಸಮೂರ್ತಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಸಿಗುವುದಿಲ್ಲ. ಇದು ಶೇ.200ರಷ್ಟು ಖಾತ್ರಿಯಾಗಿದೆ. ಎಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಅಧ್ಯಕ್ಷರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.

ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆದ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಕಚೇರಿಗೆ ಬಾ ಎಂದು ಕರೆದರು. ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಯಾವುದೇ ಹಿಂಜರಿಕೆ ಇಲ್ಲದೆ ಪಕ್ಷದ ಕಚೇರಿಗೆ ಬರುವಂತೆ ನನಗೆ ಹೇಳಿದರು ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಈ ಮಾತುಕತೆ ಸಾಕಷ್ಟು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಖಂಡ ಶ್ರೀನಿವಾಸಮೂರ್ತಿ, ಮಾಜಿ ಸಚಿವ ಜಮೀರ್ ಅಹಮ್ಮದ್‍ಖಾನ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಇತ್ತೀಚೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ಅತ್ಯಾಪ್ತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾತುಕತೆ ನಡುವೆ ಪ್ರಸನ್ನಕುಮಾರ್ ಅವರು ಸಿದ್ದರಾಮಯ್ಯನವರ ಬಗ್ಗೆ ಪ್ರಸ್ತಾಪಿಸಿದ್ದು, ಅಖಂಡ ಶ್ರೀನಿವಾಸಮೂರ್ತಿ ಈ ರೀತಿಯ ವ್ಯಕ್ತಿ ಎಂದು ಅವರಿಗೆ ಮಾಹಿತಿ ಇರಲಿಲ್ಲ. ಯಾರೋ ಹೇಳಿದರು ಎಂದು ಪಾಪ ಕಾಂಗ್ರೆಸ್‍ಗೆ ಸೇರಿಸಿಕೊಂಡಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಗುಂಪೊಂದು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಾಂಗ್ರೆಸ್ ನಾಯಕರೇ ಆದ ಮಾಜಿ ಮೇಯರ್ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಅವರನ್ನು ಬಂಸಿದ್ದಾರೆ.

ಬಂತರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಅಖಂಡ ಶ್ರೀನಿವಾಸಮೂರ್ತಿ ಪಕ್ಷದಲ್ಲಿ ಸಾಕಷ್ಟು ಒತ್ತಡ ತಂದರೂ ಪ್ರಯೋಜನವಾಗಿಲ್ಲ. ಈ ಹಿಂದೆ ಪ್ರಸನ್ನಕುಮಾರ್ ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದರು. 2013ರ ಚುನಾವಣೆಯಲ್ಲಿ ಸಂಪತ್‍ಕುಮಾರ್, ಜಾಕೀರ್ ಹುಸೇನ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪರೋಕ್ಷವಾಗಿ ಬೆಂಬಲಿಸಿ ಗೆಲ್ಲುವಂತೆ ಮಾಡಿದ್ದರು.

ಬದಲಾದ ರಾಜಕೀಯದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದಲೇ ಗೆದ್ದಿದ್ದಾರೆ. ಈಗ ಸಂಪತ್‍ಕುಮಾರ್, ಅಖಂಡ ಶ್ರೀನಿವಾಸಮೂರ್ತಿ ಅವರ ನಡುವೆ ಜಿದ್ದಾಜಿದ್ದಿನ ರಾಜಕೀಯ ಆರಂಭವಾಗಿದೆ. ಈ ನಡುವೆ ಜೆಡಿಎಸ್ ಸೇರ್ಪಡೆಯಾಗಿದ್ದ ಪ್ರಸನ್ನಕುಮಾರ್ ಅವರು ಮರಳಿ ಕಾಂಗ್ರೆಸ್‍ಗೆ ಬಂದಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ಯಾರಿಗೆ ಎಂಬ ಕುತೂಹಲ ತೀವ್ರವಾಗಿರುವ ಹಂತದಲ್ಲಿ ಪ್ರಸನ್ನಕುಮಾರ್ ಅವರ ಆಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Facebook Comments

Sri Raghav

Admin