ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ನಿಂದ ಕಡೆಯ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20-ಅತೃಪ್ತ ಶಾಸಕರನ್ನು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಮರುಪರಿಶೀಲಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ತೀರ್ಪಿನ ಮೇಲೆ ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ಬಹುತೇಕ ಅವಲಂಬಿತವಾಗಿದೆ.

ಸದ್ಯದ ಲೆಕ್ಕಾಚಾರದಲ್ಲಿ ಶಾಸಕರ ಸಂಖ್ಯಾಬಲದ ಕೊರತೆಯಿಂದ ಪತನದ ಅಂಚಿಗೆ ಬಂದು ನಿಂತಿರುವ ಸಮ್ಮಿಶ್ರ ಸರ್ಕಾರ ಕೊನೆ ಹಂತದಲ್ಲಿ ಕಾನೂನಾತ್ಮಕ ಹೋರಾಟದ ಮೂಲಕ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ.

ಒಂದೆಡೆ ಮುಂಬೈನಲ್ಲಿರುವ ಶಾಸಕರನ್ನು ಸಂಪರ್ಕಿಸಿ ಸಂಧಾನ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅಲ್ಲಿರುವ ಅಷ್ಟೂ ಮಂದಿ ಶಾಸಕರು ಸಂಧಾನಕ್ಕೆ ಜಗ್ಗಿಲ್ಲ. ಆದರೂ ಪ್ರಯತ್ನ ಬಿಡದೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರ ಮೂಲಕ ಅತೃಪ್ತರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ.

ಆದರೆ ಮುಂಬೈನಿಂದ ಅವರು ವಾಪಸ್ ಬಂದು ಸರ್ಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ಉಭಯ ಪಕ್ಷಗಳ ನಾಯಕರಲಿಲ್ಲ. ಹೀಗಾಗಿ ಒಂದೆಡೆ ಸಂಧಾನ ಪ್ರಕ್ರಿಯೆ ಜೀವಂತವಾಗಿಡುತ್ತಲೇ, ಮತ್ತೊಂದೆಡೆ ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಸುಪ್ರೀಂಕೋರ್ಟ್‍ನಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ರಾಜೀನಾಮೆ ನೀಡಿರುವ ಶಾಸಕರನ್ನು ಸದನದಲ್ಲಿ ಭಾಗವಹಿಸಲು ಬಲವಂತ ಮಾಡಬಾರದು ಎಂಬ ತೀರ್ಪು ಹೊರಬಿದ್ದಿದೆ.

ಇದಕ್ಕೆ ಸ್ಪಷ್ಟನೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಪೀಕರ್ ರಮೇಶ್‍ಕುಮಾರ್ ಅವರು ವಿಪ್ ಜಾರಿ ಮತ್ತು ಅನಂತರದ ಪರಿಣಾಮಗಳ ಬಗ್ಗೆ ಸ್ಪಷ್ಟನೆ ಕೋರಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸಮಯದ ಗಡುವು ನೀಡುತ್ತಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಮೂರೂ ಅರ್ಜಿಗಳ ವಿಚಾರಣೆಗೆ ಈವರೆಗೂ ಸುಪ್ರೀಂಕೋರ್ಟ್ ಯಾವುದೇ ಪ್ರಕ್ರಿಯೆಗಳನ್ನು ಆರಂಭಿಸಿಲ್ಲ. ಬಹುತೇಕ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂಬ ನಿರೀಕ್ಷೆಗಳು ಸರ್ಕಾರದ್ದಾಗಿದೆ.

ಒಂದು ವೇಳೆ ವಿಚಾರಣೆ ನಡೆದು ಸೂಕ್ತ ಮಾರ್ಗದರ್ಶನ ದೊರೆತರೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ವಿಪ್ ಜಾರಿ ಕಡ್ಡಾಯವಲ್ಲ ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ಪುನರ್ ಪರಿಶೀಲಿಸಲು ಒಪ್ಪಿಕೊಂಡರೆ ಸರ್ಕಾರಕ್ಕೆ ಪುನರ್ಜನ್ಮ ಸಿಕ್ಕಂತಾಗುತ್ತದೆ.

ವಿಪ್ ಜಾರಿಗೆ ಅವಕಾಶ ಸಿಕ್ಕರೆ ಅತೃಪ್ತ ಶಾಸಕರನ್ನು ಒಂದೇ ಏಟಿಗೆ ಅನರ್ಹಗೊಳಿಸಿ ಪಾಠ ಕಲಿಸಲು ಉಭಯ ಪಕ್ಷಗಳ ಮುಖಂಡರು ಸಿದ್ಧರಿದ್ದಾರೆ. ಷೆಡ್ಯೂಲ್ 10 ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಶಾಸಕರನ್ನು ಅನರ್ಹಗೊಳಿಸಿದರೆ ಅವರು ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುತ್ತದೆ.

ಮತ್ತೊಂದು ಚುನಾವಣೆಯಲ್ಲಿ ಗೆಲ್ಲುವ ತನಕ ಸಚಿವ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆ ಹೊಂದಲು ಅವಕಾಶ ಇಲ್ಲ. ಹೀಗಾಗಿ ಸದ್ಯದಲ್ಲಿ ಅತೃಪ್ತರ ಕನಸು ಭಗ್ನಗೊಳ್ಳುತ್ತದೆ. ಜನಪ್ರಾತಿನಿಧ್ಯ ಕಾಯ್ದೆಯಲ್ಲಿ ಪಕ್ಷಾಂತರ ಮಾಡುವ ಶಾಸಕರನ್ನು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಅವಕಾಶ ಇದೆ ಎಂದು ಹೇಳಲಾಗಿದೆ.

ದೋಸ್ತಿ ಪಕ್ಷಗಳು ಈ ಕಾಯ್ದೆ ಬಳಸಿ ಅತೃಪ್ತರ ರಾಜಕೀಯ ಭವಿಷ್ಯ ಮುಗಿಸಲು ತಯಾರಿ ನಡೆಸಿವೆ. ಒಂದು ವೇಳೆ ಸೋಮವಾರ ಸುಪ್ರೀಂಕೋರ್ಟ್ ವಿಪ್ ಕುರಿತು ನೀಡಿರುವ ಆದೇಶವನ್ನು ಸಡಿಲಿಸಲು ಒಪ್ಪಿದರೆ ವಿಶ್ವಾಸ ಮತದ ಮೇಲಿನ ಚರ್ಚೆ ಮತ್ತೊಂದು ದಿನ ಮುಂದುವರೆಯಲಿದ್ದು, ಮುಂಬೈನಲ್ಲಿರುವ ಶಾಸಕರಿಗೆ ಕೊನೆಯ ಎಚ್ಚರಿಕೆ ರವಾನಿಸಲಾಗುವುದು. ಅದಕ್ಕೂ ಬಗ್ಗದೆ ಇದ್ದರೆ ಕಾನೂನಿನ ದಂಡ ಪ್ರಯೋಗ ಮಾಡಿ ಪಾಠ ಕಲಿಸಲು ನಿರ್ಧರಿಸಲಾಗಿದೆ. ಸರ್ಕಾರ ಉಳಿಸಿಕೊಳ್ಳಲು ಸದ್ಯಕ್ಕೆ ದೋಸ್ತಿ ಪಕ್ಷಗಳಿಗಿರುವುದು ಇದೊಂದೇ ಆಯ್ಕೆಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin