ಬಿಜೆಪಿ ಒಳಜಗಳ: ಹಲವು ಅನುಮಾನಗಳಿಗೆ ಕಾರಣವಾದ ಕಾಂಗ್ರೆಸ್‍ನ ನಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ರಾಜ್ಯ ಸರ್ಕಾರದ ಒಳಜಗಳದ ಬಗ್ಗೆ ಕಾಂಗ್ರೆಸ್ ಕಾದು ನೋಡುವ ತಂತ್ರಗಾರಿಕೆ ಅನುಸರಿಸಿದ್ದು, ಪ್ರಮುಖ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ರಮೇಶ್ ಜಾರಕಿಹೊಳಿ ಪ್ರಕರಣದ ಕುರಿತಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರೆಪಿಸ್ಟ್ ರಮೇಶ್ ರನ್ನು ಬಂಧಿಸಿ ಎಂದು ಒತ್ತಾಯಿಸಿದ್ದರು. ಆದರೆ ರಾಜ್ಯ ಬಿಜೆಪಿಯಲ್ಲಿನ ಕುರ್ಚಿಗಾಗಿ ಗುದ್ಧಾಟದ ಬಗ್ಗೆ ಪ್ರಶ್ನೆಗಳು ಎದುರಾದಾಗ ಯಾವುದೇ ಪ್ರತಿಕ್ರಿಯೆ ನೀಡದೆ ನಾಳೆ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತೇವೆ ಎಂದು ಜಾರಿಕೊಂಡಿದ್ದರು.

ಈ ಮೊದಲೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆಯ ಬಗ್ಗೆ ಹಲವಾರು ಬಾರಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ತಮಗೆ ದೆಹಲಿಯ ಮೂಲಗಳಿಂದ ಮಾಹಿತಿ ಇದೆ. ಮೇ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ನಡೆಯಲಿದೆ ಎಂದು ಕಳೆದ ವರ್ಷ ಹೇಳಿದ್ದರು. ಆದರೆ ಅದು ನಡೆಯಲಿಲ್ಲ. ಮತ್ತೊಮ್ಮೆ ಇದೇ ಚರ್ಚೆ ಆರಂಭವಾದಾಗ ನಾನು ಹೇಳಿದ್ದು ನಡೆಯಲಿಲ್ಲ. ಇನ್ನೂ ಮುಂದೆ ನಾನು ಬಿಜೆಪಿ ನಾಯಕತ್ವದ ಬಗ್ಗೆ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಸ್ವಯಂ ನಿಯಂತ್ರಣ ವಿಧಿಸಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಆಂತರಿಕ ವಿಚಾರದಲ್ಲಿ ತಾವು ತಲೆ ಹಾಕಲ್ಲ ಎನ್ನುತಲೇ ಇರುತ್ತಾರೆ. ಆದರೆ ಅವರ ರಾಜಕೀಯ ಎದುರಾಳಿ ಸಿ.ಪಿ.ಯೋಗೇಶ್ವರ್ ಬಿಜೆಪಿ ಕುರ್ಚಿ ಕದನದಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಮೊದಲು ಯೋಗೇಶ್ವರ್ ಮತ್ತು ಡಿ.ಕೆ.ಸಹೋದರರ ನಡುವೆ ಬಹಿರಂಗ ವಾಕ್ಸಮರಗಳು ನಡೆದಿದ್ದವು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಮೌನ ಹಲವಾರು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ನಾಯಕತ್ವ ಬದಲಾವಣೆಯ ಬಗ್ಗೆ ಬಿಜೆಪಿಯಲ್ಲಿ ಬಹಿರಂಗ ಹೇಳಿಕೆಗಳು ಕೇಳಿ ಬರುತ್ತಿವೆ. ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಜನರ ಪ್ರಾಣ ಉಳಿಸಬೇಕಾದ ಸಂದರ್ಭದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.

ಒಂದೆಡೆ ಕೊರೊನಾ ಸೋಂಕಿನಿಂದ ಜೀವ ಹಾನಿಯಾಗುತ್ತಿದ್ದರೆ, ಮತ್ತೊಂದೆಡೆ ಲಾಕ್ ಡೌನ್ ಜನರ ಜೀವನ ಕೊಲ್ಲುತ್ತಿದೆ. ಆರ್ಥಿಕತೆ ನೆಲ ಕಚ್ಚಿದೆ. ಆದರೂ ಆಡಳಿತ ಪಕ್ಷದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಜಂಗಿಕುಸ್ತಿ ಬಗ್ಗೆ ಪ್ರತಿಪಕ್ಷ ಪ್ರತಿಕ್ರಿಯಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಸಣ್ಣ ಪ್ರಮಾಣದ ಆಕ್ಷೇಪ ಹೊರತು ಪಡಿಸಿದರೆ ಅಂತಹ ನಿಷ್ಠೂರ ಅಭಿಪ್ರಾಯಗಳು ಕೇಳಿ ಬರುತ್ತಿಲ್ಲ. ಒಬ್ಬ ವ್ಯಕ್ತಿಗೆ ಸಂಬಂಧಿಸಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಷ್ಟು ಗಂಭೀರ ಹೇಳಿಕೆಗಳನ್ನು ನೀಡಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಆಡಳಿತ ಹಳ್ಳ ಹಿಡಿಸುತ್ತಿರುವ ಕುರ್ಚಿ ಕಿತ್ತಾಟದ ಬಗ್ಗೆ ಮೌನ ಏಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸದ್ಯಕ್ಕೆ ರಾಜಕೀಯವಾಗಿ ಯಾವುದೇ ಬೆಳವಣಿಗೆಗಳಾದರೂ ಕಾಂಗ್ರೆಸ್ ನಾಯಕರಿಗೆ ಹೆಚ್ಚು ಲಾಭ ಎನ್ನಲಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೂ ಚುನಾವಣೆ ವೇಳೆ ಕಾಂಗ್ರೆಸ್ ಗೆ ಲಾಭವಾಗಲಿದೆ. ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಹೆಚ್ಚು ಕಡಿಮೆಯಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೂ ಕಾಂಗ್ರೆಸ್ ಗೆ ಲಾಭ. ಸಂಕಷ್ಟ ಸಂದರ್ಭದಲ್ಲಿ ಜನರಿಗೆ ಸ್ಪಂಧಿಸದೆ ಅಧಿಕಾರಕ್ಕಾಗಿ ಕಿತ್ತಾಟದಲ್ಲಿ ಕಾಲ ಕಳೆದರು ಎಂಬ ಡ್ಯಾಮೇಜ್ ನಿಂದ ಬಿಜೆಪಿಗೆ ಹಾನಿಯಾಗಲಿದೆ. ಮುಂದೆ ನಡೆಯುವ ಚುನಾವಣೆಯಲ್ಲಿ ಜನ ನಿರಾಯಸವಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ನಿರೀಕ್ಷೆ ನಾಯಕರಲ್ಲಿದೆ.

ಈ ಮೊದಲು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ಚಟುವಟಿಕೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ನೆರೆ ಹಾವಳಿ, ಬರದ ಸಂಕಷ್ಟ ಎರಡು ಜನರನ್ನು ಕಾಡುತ್ತಿದ್ದವು. ಆದರೆ ಬಿಜೆಪಿ ರೆಸಾರ್ಟ್ ರಾಜಕೀಯಕ್ಕಿಳಿದಿತ್ತು, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿತ್ತು, ನಂತರ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಇಬ್ಬರು ಎರಡು ವರ್ಷದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಮುಖ್ಯಮಂತ್ರಿಗಳಾದರು. ಬಿಜೆಪಿಯ ರಾಜಕೀಯ ಬೆಳವಣಿಗೆಗಳಿಂದ ಬೆಸತ್ತ ಜನ ಕಾಂಗ್ರೆಸ್ ಗೆ ನಿರಾಯಾಸವಾಗಿ ಅಧಿಕಾರ ನೀಡಿದ್ದರು.

ಈಗಲೂ ಅದೇ ಪರಿಸ್ಥಿತಿ ಇದೆ. ಬಿಜೆಪಿ ತಾನಾಗಿಯೇ ಇಮೇಜ್ ಹಾಳು ಮಾಡಿಕೊಳ್ಳುತ್ತಿದೆ, ಇಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಉಳಿದರೆ ಸಾಕು. ಜನ ತೀರ್ಮಾನ ಮಾಡುತ್ತಾರೆ ಎಂಬ ನಿಲುವು ಕಾಂಗ್ರೆಸಿಗರದು. ಆದರೆ ಒಳಗೊಳಗೆ ಬೇರೆಯೇ ಲೆಕ್ಕಾಚಾರಗಳಿವೆ. ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸರ್ಕಾರ ಪತನವಾಗಿ ಪರ್ಯಾಯ ಸರ್ಕಾರದ ಪರಿಸ್ಥಿತಿ ಎದುರಾದರೆ ಮುಖ್ಯಮಂತ್ರಿಯಾಗುವವರು ಯಾರು ಎಂಬ ಮುಸುಕಿನ ಗುದ್ದಾಟ ಕಾಂಗ್ರೆಸ್ ನಲ್ಲಿದೆ. ಇತ್ತೀಚೆಗೆ ಮುಂಚೂಣಿಯಲ್ಲಿರುವ ಮೂವರು ನಾಯಕರು ನಿರಂತರವಾಗಿ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಕ್ಷದ ಲೆಕ್ಕಾಚಾರದಂತೆ ಕಾಂಗ್ರೆಸ ಮುಂದೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಲು ಅನೇಕರು ಟವಲ್ ಹಾಕಿಕೊಂಡು ಕುಳಿತಿದ್ದಾರೆ. 2013ರಂತೆ ತಮ್ಮ ನಾಯಕತ್ವದಿಂದಲೇ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ ಎಂದು ಕ್ಲೈಮ್ ಮಾಡಿಕೊಳ್ಳಲು ಒಳಗೊಳಗೆ ಎಲ್ಲಾ ತಯಾರಿಗಳು ನಡೆದಿವೆ.

ಅದಕ್ಕಾಗಿ ಸದ್ಯದ ಬಿಜೆಪಿ ವಿದ್ಯಮಾನಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸದ್ಯಕ್ಕೆ ಮೌನವಾಗಿರಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಆಡಳಿತ ವ್ಯವಸ್ಥೆ ಹದಗೆಟ್ಟು ಜನರಿಗೆ ತೊಂದರೆಯಾಗುತ್ತಿರುವಾಗಲೂ ಜವಾಬ್ದಾರಿಯುವ ಪ್ರತಿಪಕ್ಷವಾಗಿ ಮೌನವಾಗಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Facebook Comments