ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ : ಕಾಂಗ್ರೆಸ್ ಪ್ರೊಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿದ ಬಿಜೆಪಿ ಮುಖಂಡ ವೇಲು ನಾಯ್ಕರ್ ಮತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ನಂದಿನಿ ಲೇಔಟ್ ಪೊಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀದೇವಿನಗರ ಮತಗಟ್ಟೆ ಸಂಖ್ಯೆ 156 ಬಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮ ಅವರ ಪರ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್‍ನ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಬೆಂಬಲಿಗರಾದ ವೇಲುನಾಯ್ಕರ್ ಮತ್ತು 30ಕ್ಕೂ ಹೆಚ್ಚು ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕವನ್ನು ಹರಿದು ಹಾಕಿದ್ದಾರೆ. ನಂತರ ಮಾಜಿ ಸಂಸದರಾದ ಧೃವನಾರಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರ ಕಾರ್ಯಕ್ಕೆ ವೇಲು ನಾಯ್ಕರ್ ಮತ್ತು ಸಹಚರರು ಅಡ್ಡಿ ಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಹಲ್ಲೆ ಮಾಡಿದ ವೇಲುನಾಯ್ಕರ್‍ರನ್ನು ಬಂಧಿಸಿ ಒಂದು ಘೋಷಣೆ ಕೂಗಿದರು. ಮುನಿರತ್ನರ ಗುಂಡಾ ವರ್ತನೆಗೆ ಧಿಕ್ಕಾರ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದ ಪ್ರತಿಭಟನಾಕಾರರು, ಕಾಂಗ್ರೆಸ್ ಇಂತಹ ಬೆದರಿಕೆಗಳಿಗೆಲ್ಲಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದಿದ್ದಾರೆ.

ನಾನು ಕಾಯುತ್ತಿದ್ದೇನೆ:
ಇನ್ನೊಂದೆಡೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು, ಚುನಾವಣೆ ಪಾಡಿಗೆ ಚುನಾವಣೆ ಮಾಡಬೇಕು. ಹೆದುರಿಸುವುದನ್ನು ಮಾಡಿದರೆ, ಪೊಲೀಸ್ ಠಾಣೆ ಎದುರು ಚುನಾವಣೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಕೊನೆ ಎಚ್ಚರಿಕೆ. ನಮ್ಮ ಹುಡುಗರು ಪ್ರಚಾರ ನಡೆಸುವಾಗ ತೊಂದರೆ ಮಾಡುವುದು, ಧಮಕಿ ಹಾಕುವುದನ್ನು ಮಾಡಿದರೆ ಮುನಿರತ್ನನಿಗೆ ಹೇಳಿ ಕಾಯ್ತಾವ್ರಪ್ಪ ಅಣ್ಣ ಅಂತ, ನಾನು ಕಾಯ್ತಾ ಇದ್ದೀನಿ ಎಂದು ತಮ್ಮದೇ ದಾಟಿಯಲ್ಲಿ ಹೇಳಿದ್ದಾರೆ.

Facebook Comments