ಸ್ವಯಂ ಅಪಘಾತ ಕಾನ್ಸ್‍ಟೆಬಲ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಕಾನ್ಸ್‍ಟೆಬಲ್ ಒಬ್ಬರು ಸ್ವಯಂ ಅಪಘಾತದಿಂದ ಮೃತಪಟ್ಟಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‍ಟೆಬಲ್ ಆಗಿದ್ದ ಬಿಜಾಪುರ ಮೂಲದ ಸೋಮಲಿಂಗ ಮಾಲಿ (33) ಅಪಘಾತದಲ್ಲಿ ಮೃತಪಟ್ಟ ಪೊಲೀಸ್.

ನಿನ್ನೆ ಹೊಯ್ಸಳ ವಾಹನದಲ್ಲಿ ಕರ್ತವ್ಯ ನಿರ್ವಹಿಸಿ ವರ್ತೂರಿನಲ್ಲಿರುವ ತಮ್ಮ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಾತ್ರಿ 11 ಗಂಟೆ ಸಮಯದಲ್ಲಿ ಚಿಕ್ಕಬೆಳ್ಳಂದೂರು ತಿರುವಿನಲ್ಲಿ ಆಯತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದರು.

ಡಿಕ್ಕಿಯ ರಭಸಕ್ಕೆ ಮಾಲಿ ಅವರ ತಲೆಗೆ ಮತ್ತು ಕೈಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯರು ವರ್ತೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ವರ್ತೂರು ಪೊಲೀಸರು ಹೊಯ್ಸಳ ವಾಹನದಲ್ಲಿ ಮಾಲಿ ಅವರನ್ನು ಸಮೀಪದ ಸುರಕ್ಷಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಾನ್ಸ್‍ಟೆಬಲ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಕಾನ್ಸ್‍ಟೆಬಲ್ ಪತ್ನಿ, ಐದು ವರ್ಷದ ಪುತ್ರಿ ಹಾಗೂ ಮೂರು ವರ್ಷದ ಪುತ್ರನನ್ನು ಅಗಲಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ವರ್ತೂರು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments