ಬೈಕ್‍ನಿಂದ ಬಿದ್ದು ಕಾನ್ಸ್ಟೆಬಲ್ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜ.1- ರಾತ್ರಿ ಪಾಳಿಯ ಕರ್ತವ್ಯಕ್ಕೆ ತೆರಳಿದ್ದ ಕಾನ್ಸ್‍ಟೇಬಲ್ ಬೈಕ್‍ನಲ್ಲಿ ಬರುತ್ತಿದ್ದಾಗ ಆಯ ತಪ್ಪಿ ರಸ್ತೆ ಬದಿಯ ಚಾನಲ್‍ಗೆ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹನೂರು ಸಮೀಪದ ಅರ್‍ಎಸ್ ದೊಡ್ಡಿ ಗ್ರಾಮದ ಸಿದ್ದರಾಜು(45) ಮೃತಪಟ್ಟ ಕಾನ್ಸ್ ಟೇಬಲ್.

ಗ್ರಾಮಾಂತರ ಠಾಣೆ ಅಪರಾಧ ವಿಭಾಗದಲ್ಲಿ ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜು ಅವರು ರಾತ್ರಿ ಪಾಳಿಗಾಗಿ ಸತೇಗಾಲದ ಜಾಗೇರಿಯಿಂದ ಬರುತ್ತಿದ್ದಾಗ ಪಟ್ಟಣದ ಹೊರ ವಲಯದಲ್ಲಿನ ಹೊಸಅಣಗಲ್ಲಿ ಗ್ರಾಮದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಿರಿದಾದ ಚಾನಲ್‍ಗೆ ಉರುಳಿದೆ. ಪರಿಣಾಮವಾಗಿ ಸಿದ್ದರಾಜು ನೀರಿನಲ್ಲಿ ಮುಳುಗಿದ್ದು , ಇವರ ಮೇಲೆ ಬೈಕ್ ಬಿದ್ದ ಪರಿಣಾಮ ಮೇಲೇಳಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಬೈಕ್‍ನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್‍ನ್ನು ಹೊರಗೆತ್ತಿ ನೋಡಿದಾಗ ನೀರಿನಲ್ಲಿ ಮುಳುಗಿ ಕಾನ್ಸ್‍ಟೇಬಲ್ ಸಿದ್ದರಾಜು ಮೃತಪಟ್ಟಿರುವ ಕಂಡು ಬಂದಿದೆ.  ಸುದ್ದಿ ತಿಳಿದ ಶಾಸಕರಾದ ಪುಟ್ಟರಂಗ ಶೆಟ್ಟಿ , ಆರ್. ನರೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Facebook Comments