ಕಂಟೈನರ್ಗೆ ಕಾರು ಡಿಕ್ಕಿ, ಅಬಕಾರಿ ಎಸ್ಐ ಸೇರಿ ನಾಲ್ವರ ದುರ್ಮರಣ..!
ಹಾಸನ, ಫೆ.13- ನಿಂತಿದ್ದ ಕಂಟೈನರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಅಬಕಾರಿ ಸಬ್ಇನ್ಸ್ಪೆಕ್ಟರ್ ಹಾಗೂ ಮೂವರು ಸಾಫ್ಟ್ವೇರ್ ಎಂಜಿನಿಯರ್ಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಮೃತಪಟ್ಟವರನ್ನು ನೆಲಮಂಗಲ ಮೂಲದ ಅಬಕಾರಿ ಎಸ್ಐ ಚೇತನ್, ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ಗಳಾದ ಮಂಜುನಾಥ್, ವಿಕ್ರಮ್, ಅಭಿಷೇಕ್ ಎಂದು ಗುರುತಿಸಲಾಗಿದೆ.ಚೇತನ್ ಅವರು ಅಬಕಾರಿ ಎಸ್ಐ ಆಗಿ ನೇಮಕಗೊಂಡಿದ್ದು, ತರಬೇತಿ ಮುಗಿಸಿದ್ದರು. ಸೋಮವಾರ ಹುದ್ದೆಗೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ನಿನ್ನೆ ರಾತ್ರಿ ಚೇತನ್ ಅವರು ತಮ್ಮ ಸ್ನೇಹಿತರಾದ ಮಂಜುನಾಥ್, ವಿಕ್ರಮ್, ಅಭಿಷೇಕ್ ಅವರೊಂದಿಗೆ ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಹೊರಟಿದ್ದರು.ಇಂದು ಮುಂಜಾನೆ ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಕಂಟೈನರ್ಗೆ ಕಾರು ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸುದ್ದಿ ತಿಳಿದ ಚನ್ನರಾಯಪಟ್ಟಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿದೆ.