ಕಂಟೋನ್ಮೆಂಟ್ ಝೋನ್‍ಗಳಲ್ಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.5- ಕಂಟೋನ್ಮೆಂಟ್ ಝೋನ್‍ಗಳಲ್ಲಿರುವ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ.  ಇದೇ 25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹಾಗೂ ಜೂ.18ರಂದು ಪಿಯುಸಿ ಇಂಗ್ಲಿಷ್ ಪರೀಕ್ಷೆ ಆರಂಭಗೊಳ್ಳಲಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕಂಟೋನ್ಮೆಂಟ್ ಝೋನ್‍ಗಳಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ರದ್ದುಗೊಳಿಸಿ ಸಮೀಪದ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ 40 ಕಂಟೋನ್ಮೆಂಟ್ ಝೋನ್‍ಗಳಿದ್ದು, ಅಲ್ಲಿರುವ ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರ ಮಾಡಿದ ಆದೇಶವನ್ನು ಪಿಯು ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ರವಾನಿಸಲಾಗುವುದು.  ಪ್ರಸ್ತುತ ಪಾದರಾಯನಪುರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರವಿರುವುದರಿಂದ ಆ ಪರೀಕ್ಷಾ ಕೇಂದ್ರವನ್ನು ಪಕ್ಕದ ಕಸ್ತೂರ ಬಾ ನಗರಕ್ಕೆ ಶಿಫ್ಟ್ ಮಾಡಲು ತೀರ್ಮಾನಿಸಲಾಗಿದೆ.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಈ ತೀರ್ಮಾನಕ್ಕೆ ಬಂದಿದೆ. ಸೀಲ್‍ಡೌನ್ ತೆರವು: ಕೊರೊನಾ ಹಾಟ್‍ಸ್ಪಾಟ್ ಆಗಿರುವ ಪಾದರಾಯನಪುರದ 11ನೆ ಕ್ರಾಸ್‍ನಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ಸೀಲ್‍ಡೌನ್ ಮಾಡಲಾಗಿತ್ತು.

ಇದೀಗ 11ನೆ ಕ್ರಾಸ್‍ನಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಸೋಂಕು ಪತ್ತೆಯಾಗದಿರುವುದರಿಂದ ಹಾಗೂ ಅಲ್ಲಿನ ಸೋಂಕಿತರೆಲ್ಲರೂ ಗುಣಮುಖರಾಗಿರುವುದರಿಂದ ಕಳೆದ 60 ದಿನಗಳಿಂದ ವಿಧಿಸಲಾಗಿದ್ದ ಸೀಲ್‍ಡೌನ್‍ಅನ್ನು ಬಿಬಿಎಂಪಿ ಅಧಿಕಾರಿಗಳು ಇಂದು ತೆರವುಗೊಳಿಸಿದರು.

Facebook Comments