ವಲಸಿಗರಿಂದ ಬೆಂಗಳೂರಿನ ಗಲ್ಲಿ ಗಲ್ಲಿಗೂ ಎಂಟ್ರಿ ಕೊಡ್ತಿದೆ ಕೊರೊನಾ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಲಸಿಗರಿಂದ ನಗರದ ಗಲ್ಲಿ ಗಲ್ಲಿಗೂ ಕೊರೊನಾ ಸೋಂಕು ಹರಡುತ್ತಿರುವುದರಿಂದ ಕಂಟೈನ್ಮೆಂಟ್ ಝೋನ್‍ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಪ್ರಸ್ತುತ 40 ವಾರ್ಡ್‍ಗಳಲ್ಲಿ ಕಂಟೈನ್ಮೆಂಟ್ ವ್ಯವಸ್ಥೆ ಜಾರಿ ಮಾಡಲಾಗಿದೆ.

ಆದರೆ, ದಿನದಿಂದ ದಿನಕ್ಕೆ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಕಂಟೈನ್ಮೆಂಟ್ ಮಾದರಿಯಲ್ಲಿ ಬದಲಾವಣೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಹೊರತುಪಡಿಸಿ ವಿದೇಶ ಮತ್ತು ಹೊರರಾಜ್ಯಗಳಿಂದ ಆಗಮಿಸುವವರಿಗೆ ರೋಗ ಲಕ್ಷಣ ಪರೀಕ್ಷೆ ಮಾಡಿ ನೇರವಾಗಿ ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗುತ್ತಿದೆ.

ಒಂದು ವೇಳೆ ರೋಗ ಪರೀಕ್ಷೆ ಸಂದರ್ಭದಲ್ಲಿ ಸೋಂಕು ಪತ್ತೆಯಾದರೆ ಅಂತಹವರೊಂದಿಗೆ ಕನಿಷ್ಟ 10 ರಿಂದ 50 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ಸೋಂಕಿತರೊಂದಿಗೆ ಸಂಪರ್ಕವಿರಿಸಿಕೊಂಡ ಶೇ.20ರಷ್ಟು ಮಂದಿಗೆ ರೋಗ ತಗುಲುವ ಸಾಧ್ಯತೆ ಇರುವುದರಿಂದ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ಹೀಗಾಗಿ ಸರ್ಕಾರ ಪ್ರದೇಶ, ನಿರ್ದಿಷ್ಟ ವ್ಯಾಪ್ತಿ, ಅಪಾರ್ಟ್‍ಮೆಂಟ್, ಕೊಳಗೇರಿ ಹಾಗೂ ಹೊಟೇಲ್ ಕಂಟೈನ್ಮೆಂಟ್ ಎಂದು ಐದು ವಿವಿಧ ಮಾದರಿಯ ಝೋನ್‍ಗಳನ್ನು ಗುರುತಿಸಿದೆ. ಸೋಂಕು ಹೊಂದಿರುವ ವ್ಯಕ್ತಿಯ ವಾಸಸ್ಥಳದ ಆಧಾರದಲ್ಲಿ 100 ಮೀಟರ್ ಸುತ್ತಳತೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುತ್ತಿದೆ.  ಅಪಾರ್ಟ್‍ಮೆಂಟ್ ನಿವಾಸಿ ಸೋಂಕಿಗೀಡಾದರೆ ಅವರ ವಾಸದ ಮಹಡಿ, ಮೇಲಿನ ಮಹಡಿ ಹಾಗೂ ಕೆಳಮಹಡಿಯನ್ನು ಸೀಲ್ ಮಾಡಲಾಗುತ್ತದೆ.

ಕೊಳಗೇರಿ ಪ್ರದೇಶದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ ಅವರು ವಾಸವಿರುವ ರಸ್ತೆಯ ಜತೆಗೆ ಹಿಂದೆ ಮತ್ತು ಮುಂದಿನ ಎರಡೂ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ.ಸೋಂಕಿತ ವ್ಯಕ್ತಿ ಹಾಗೂ ಆತನಿಂದ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆಗಳಿರುವ ಒಟ್ಟು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗುತ್ತದೆ.

ಹೊಟೇಲ್ ಕ್ವಾರಂಟೈನ್‍ನಲ್ಲಿರುವ ಸೋಂಕಿತ ವ್ಯಕ್ತಿ ವಾಸವಿರುವ ಹೊಟೇಲ್ ಮತ್ತು ವಸತಿ ಗೃಹಗಳನ್ನು ಕಂಟೈನ್ಮೆಂಟ್ ಎಂದು ಗುರುತಿಸಲಾಗುತ್ತಿದೆ.

ಪ್ರಸ್ತುತ 40 ವಾರ್ಡ್‍ಗಳಲ್ಲಿ ವಿವಿಧ ಮಾದರಿಯ ಕಂಟೈನ್ಮೆಂಟ್ ಜಾರಿಗೊಳಿಸಲಾಗಿದೆ. ಉಳಿದ 158 ವಾರ್ಡ್‍ಗಳಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶವಿದೆ. ಒಂದು ವೇಳೆ ಅಂತಹ ಪ್ರದೇಶದಲ್ಲಿ ಸೋಂಕು ಕಾಣಿಸಿಕೊಂಡರೆ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದೆ.

Facebook Comments