ಸೇವಾ ಖಾಯಮಾತಿಗೆ ಆಗ್ರಹಿಸಿ ಆಗ್ರಹಿಸಿ ಗುತ್ತಿಗೆ ವೈದ್ಯರ ಸಾಮೂಹಿಕ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಸೇವಾ ಖಾಯಮಾತಿಗೆ ಆಗ್ರಹಿಸಿ ಗುತ್ತಿಗೆ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದರೆ, ಇತ್ತ ಆಶಾ ಕಾರ್ಯಕರ್ತೆಯರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಜ್ಜಾಗತೊಡದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರಕ್ಕೆ ಹೊಸ ತಲೆ ಬಿಸಿ ಎದುರಾಗಿದೆ.

ರಾಜ್ಯದಲ್ಲಿ 507 ಗುತ್ತಿಗೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಹಲವಾರು ಬಾರಿ ಸರ್ಕಾರಕ್ಕೆ ಮಾಡಿದ ಮನವಿ ವಿಫಲವಾದ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಗುತ್ತಿಗೆ ವೈದ್ಯರು ತಿಳಿಸಿದ್ದಾರೆ. ಇತ್ತ 42 ಸಾವಿರ ಆಶಾ ಕಾರ್ಯಕರ್ತೆಯರು ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಆದರೆ, ನಮ್ಮ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಸೇವಾ ಭದ್ರತೆಗಾಗಿ ಆಗ್ರಹಿಸಿ ನಿನ್ನೆಯಷ್ಟೇ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡಿದೆವು. ಇಂದು ಸರ್ಕಾರದ ಗಮನ ಸೆಳೆಯಲು ಉಪವಾಸವಿದ್ದು ಕರ್ತವ್ಯ ನಿರ್ವಹಿಸಿದ್ದೇವೆ.

ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಮುನ್ಸೂಚನೆ ಇಲ್ಲದ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕಾಗಿದೆ ಎಂದು ಪ್ರತಿಭಟನಾನಿರತ ಗುತ್ತಿಗೆ ವೈದ್ಯರು ತಿಳಿಸಿದ್ದಾರೆ.

ನಮ್ಮ ಸೇವೆಯನ್ನು ಹೊಸದಾಗಿ ಖಾಯಂ ಮಾಡುವಂತೇನಿಲ್ಲ. 3 ವರ್ಷ ಗುತ್ತಿಗೆ ಸೇವೆ ಸಲ್ಲಿಸಿದವರನ್ನು ಖಾಯಂ ಮಾಡುವ ಪರಿಪಾಠವಿದೆ. ಆದರೆ ಸರ್ಕಾರ ಹಲವಾರು ವರ್ಷಗಳಿಂದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆವು.

ಅವರು ನೀಡಿದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿವೆ. ಹಾಗಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗುತ್ತಿಗೆ ವೈದ್ಯರ ಸಂಘದ ಮುಖಂಡರು ತಿಳಿಸಿದ್ದಾರೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ರೀತಿ ಮಾಡಬಾರದೆಂಬ ಸಾಮಾನ್ಯ ಜ್ಞಾನ ನಮಗಿದೆ. ಆದರೆ ನಮ್ಮ ಜೀವನಕ್ಕೆ ಹಾಗೂ ನಮ್ಮ ಅವಲಂಬಿತರ ಜೀವನಕ್ಕೆ ಯಾರು ಹೊಣೆ. ನಮಗೇನಾದರೂ ಆದರೆ, ನಮ್ಮ ಕುಟುಂಬದವರನ್ನು ನೋಡಿಕೊಳ್ಳುವವರು ಯಾರು? ನಮ್ಮ ಸೇವಾ ಭದ್ರತೆ ಇದ್ದರೆ ಅವರಿಗೆ ಅನುಕೂಲವಾಗುತ್ತದೆ. ಸೇವಾ ಭದ್ರತೆ ಇಲ್ಲದೆ ಆತಂಕದಿಂದ ಎಷ್ಟು ದಿನ ಕೆಲಸ ಮಾಡುವುದು? ಹಾಗಾಗಿ ನಾವು ಅನಿವಾರ್ಯವಾಗಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿಗಳಲ್ಲಿ ಸರ್ಕಾರ ನಮ್ಮ ಸೇವೆಯನ್ನು ಪಡೆಯುತ್ತದೆ. ಕೊಡಗು, ಉತ್ತರ ಕರ್ನಾಟಕಗಳಲ್ಲಿ ನೆರೆ ಹಾವಳಿ ಹೆಚ್ಚಾದಾಗ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಲ್ಲಿಯ ಜನರ ಸೇವೆ ಮಾಡಿದ್ದೇವೆ. ಈಗ ರಾಜ್ಯಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ. ನಾವು ನಮ್ಮ ಬದುಕನ್ನು ಲೆಕ್ಕಿಸದೆ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ್ದೇವೆ.

ಸರ್ಕಾರ ಹೆಚ್ಚುವರಿ ಭತ್ಯೆ ಪಡೆದು ಕೆಲಸ ಮಾಡಿ ಎಂದು ಹೇಳುತ್ತದೆ. ಆದರೆ, ನಮಗೆ ಹಣ ಮುಖ್ಯವಲ್ಲ; ಸೇವಾ ಭದ್ರತೆ ಒದಗಿಸಿದರೆ ಸಾಕು ಎಂದು ಅಲವತ್ತುಕೊಂಡಿದ್ದಾರೆ. ಸನ್ಮಾನ-ಹೂಮಳೆಗರೆಯುವುದು ಸಾಕು: ನಮ್ಮನ್ನು ಕರೆದು ಸನ್ಮಾನ ಮಾಡಿ ಹೂಮಳೆಗರೆಯುವುದು ಸಾಕು. ನಾವು ಕೊರೊನಾ ಭೀತಿ ನಡುವೆ ಹಗಲಿರುಳು ಕೆಲಸ ಮಾಡುತ್ತೇವೆ.

ನಮಗೆ ನೀಡುತ್ತಿರುವ ಗೌರವಧನ ಯಾವುದಕ್ಕೂ ಸಾಕಾಗುವುದಿಲ್ಲ. ನಮ್ಮ ಗೌರವಧನವನ್ನು ಹೆಚ್ಚಳ ಮಾಡಬೇಕು ಎಂದು ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಸರ್ಕಾರ ಕೇವಲ ನಮ್ಮ ಸೇವೆಯನ್ನು ಮಾತ್ರ ಪರಿಗಣಿಸಿದೆ. ಸೇವೆಗೆ ನೀಡಬೇಕಾದ ಗೌರವಧನವನ್ನು ಹೆಚ್ಚಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ರಾಜ್ಯದ 42 ಸಾವಿರ ಕಾರ್ಯಕರ್ತೆಯರು ಕೂಡ ಹೋರಾಟಕ್ಕೆ ಇಳಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ಸೋಂಕಿತರು ಮತ್ತು ಸಾವಿನ ಗ್ರಾಫ್ ದಿನೇ ದಿನೇ ಏರಿಕೆಯಾಗುತ್ತಿದೆ.

ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದೆ. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರು, ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗಿಳಿಯಲಿರುವುದು ಎಷ್ಟು ಸಮಂಜಸ..?

Facebook Comments