ಜನಜಂಗುಳಿ ನಿಯಂತ್ರಿಸಿ, ಎಚ್ಚರಿಕೆವಹಿಸಿ : ರಾಜ್ಯಗಳಿಗೆ ಕೇಂದ್ರದಿಂದ ಕಟ್ಟುನಿಟ್ಟಿನ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.11- ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದರೂ ಕೂಡ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಭವನೀಯ ಅಪಾಯಗಳ ಕುರಿತಂತೆ ಎಚ್ಚರಿಕೆ ವಹಿಸಬೇಕು. ಜನಜಂಗುಳಿಯನ್ನು ನಿಯಂತ್ರಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ದೇಶದಲ್ಲಿ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ಕೊರೊನಾ ನಿಯಂತ್ರಣದಲ್ಲಿದೆ. ಕಳೆದ 20 ದಿನಗಳಿಂದಲೂ ಸೋಂಕಿನ ಶೇ.3ರ ಗಡಿ ದಾಟಿಲ್ಲ. ಇದು ಸಮಾಧಾನಕರ ವಿಷಯ. ಆದರೆ, ಹಾಗೆಂದು ಮೈಮರೆಯುವಂತಿಲ್ಲ.

ಕೊರೊನಾ ದಿನೇ ದಿನೇ ರೂಪಾಂತರಗೊಳ್ಳುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೆ ಏರಿಕೆಯಾಗಲಿದೆ ಎಂಬ ಅಂದಾಜು ಸದ್ಯಕ್ಕಿಲ್ಲ. ಡೆಲ್ಟಾ, ಬೀಟಾ ಸೇರಿದಂತೆ ಹಲವಾರು ರೀತಿಯ ವೈರಸ್‍ಗಳು ಸೀಮಿತ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚು ಅಪಾಯ ಉಂಟು ಮಾಡಿಲ್ಲ. ಹಾಗೆಂದು ಮೈಮರೆತು ಓಡಾಡಿದರೆ ಸೋಂಕು ವ್ಯಾಪಕಗೊಳ್ಳುವ ಆತಂಕವಿದೆ.

ರಾಜಸ್ಥಾನ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮಬಂಗಾಳ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಗೋವಾ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಈಗಲೂ ಶೇ.10ಕ್ಕಿಂತಲು ಹೆಚ್ಚಿದೆ. ಅತಿ ಹೆಚ್ಚು ಸೋಂಕಿನ ಸಂಕಷ್ಟ ಅನುಭವಿಸಿದ ಕರ್ನಾಟಕದಲ್ಲಿ ಪ್ರಸ್ತುತ ಶೇ.2ರಿಂದ 3ರ ಪ್ರಮಾಣದಲ್ಲೇ ನಿಯಂತ್ರಣದಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನ ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಿಗಿಸಿಕೊಂಡಿದ್ದಾರೆ. ಪ್ರವಾಸಿ ಚಟುವಟಿಕೆಗಳು ಶುರುವಾಗಿವೆ. ಕೆಲವು ರಾಜ್ಯಗಳು ಶೈಕ್ಷಣಿಕ ಚಟುವಟಿಕೆಗಳನ್ನೂ ಆರಂಭಿಸಿವೆ.

ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು. ಮುಂದಿನ ದಿನಗಳಲ್ಲಿ ಬಕ್ರೀದ್ ಸೇರಿದಂತೆ ಕೆಲವು ಧಾರ್ಮಿಕ ಆಚರಣೆಗಳಿವೆ. ಧರ್ಮಾತೀತವಾಗಿ ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶ ನೀಡಬಾರದು. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ, ಪ್ರವಾಸಿ ತಾಣಗಳಲ್ಲಿ ನಿರ್ದಿಷ್ಟ ಪ್ರಮಾಣದ ಜನರಿಗಷ್ಟೇ ಅವಕಾಶ ನೀಡಬೇಕು. ಸಾಮಾಜಿಕ ಅಂತರಕ್ಕೆ ಅನುಕೂಲವಾಗುವಂತೆ ವಿಶಾಲ ಸ್ಥಳದಲ್ಲಿ ಅನಿವಾರ್ಯದ ಕಾರ್ಯಕ್ರಮಗಳನ್ನುಮಾಡಬೇಕು ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ನೀಡಿದೆ.

Facebook Comments