ಟರ್ಕಿ, ಈಜಿಪ್ಟ್ ನಿಂದ ಭಾರತಕ್ಕೆ ಬರಲಿದೆ ಈರುಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಬೆಂಗಳೂರು, ಡಿ.7- ಆಹಾರ ತಯಾರಿಕೆಗೆ ಅತ್ಯಂತ ಅಗತ್ಯವಾದ ಈರುಳ್ಳಿ ಬೆಲೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಗಗನಕ್ಕೇರುತ್ತಲೇ ಇದೆ. ಒಂದು ಕಿಲೋ ಈರುಳ್ಳಿಗೆ ಮಾರುಕಟ್ಟೆಯಲ್ಲೀಗ 150 ರಿಂದ 200ರೂ.ಗಳಷ್ಟು ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ಹರಿಸುತ್ತಿದೆ.

ಈರುಳ್ಳಿ ದರ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಾನಾ ಕಸರತ್ತು ಮುಂದುವರಿಸುತ್ತಿದ್ದರೂ ಬೆಲೆ ಹೆಚ್ಚಳವಾಗುತ್ತಲೇ ಇದೆ. ಜನವರಿ ತನಕ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಅಲ್ಲಿಯವರೆಗೆ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರು ಹೈರಾಣಾಗಲಿದ್ದಾರೆ.

ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಟರ್ಕಿ, ಈಜಿಪ್ಟ್ ಮೊದಲಾದ ದೇಶಗಳಿಂದ ಈರುಳ್ಳಿ ರಫ್ತು ಮಾಡಿಕೊಳ್ಳಲು ಮುಂದಾಗಿದೆ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಲಿದ್ದು, ಅಲ್ಲಿಯವರೆಗೆ ಬೇರೆ ರೀತಿಯ ಬಿಸಿ ತಟ್ಟಲಿದೆ. ಕರ್ನಾಟಕ ರಾಜ್ಯದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ರಾಜಧಾನಿ ಬೆಂಗಳೂರು ಸೇರಿದಂತೆ ಎಪಿಎಂಸಿ, ಹಾಪ್‍ಕಾಮ್ಸ್‍ಗಳಲ್ಲಿ ಈರುಳ್ಳಿ ದುಬಾರಿಯಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಳ್ಳಾಗಡ್ಡೆ ಬೆಳೆಗೆ ಭಾರೀ ಹಾನಿಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಜನವರಿವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ.

Facebook Comments