ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸಂಪುಟ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.20- ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರ ಮತಾಂತರ ನಿಷೇಧ ಕರಡು ಕಾಯ್ದೆಯನ್ನು ನಾಡಿದ್ದು 22 ಅಥವಾ 23ರಂದು ಮಂಡಿಸುವ ಸಾಧ್ಯತೆಯಿದೆ.

ಮತಾಂತರ ನಿಷೇದ ಕರಡು ಕಾಯ್ದೆ, ಗ್ರಾಮ ಪಂಚಾಯ್ತಿಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿ ಜಾರಿಗೊಳಿಸಲು ಸಭೆ ತೀರ್ಮಾನ ಕೈಗೊಂಡಿದೆ. ಉಭಯ ಸದನಗಳಲ್ಲಿ ಕಾಯ್ದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ.

ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ.ಒಂದೆರಡು ದಿನಗಳಲ್ಲಿ ಕಾಯ್ದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ. ಮತಾಂತರ ನಿಷೇಧ ಕರಡು ಕಾಯ್ದೆಗೆ ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿಯಲ್ಲಿ ಕೂಡ ಈ ಬಗ್ಗೆ ಒಮ್ಮತವಿಲ್ಲ ಎಂಬುದು ತಿಳಿದುಬಂದಿದೆ.

ಕೆಲ ಶಾಸಕರು ಈಗ ತರಾತುರಿಯಲ್ಲಿ ತರುವುದು ಬೇಡ, ಸಾರ್ವಜನಿಕವಾಗಿ ಹೆಚ್ಚು ಚರ್ಚೆಯಾಗಬೇಕು ಎಂದು ಹೇಳುತ್ತಿದ್ದಾರೆ. ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಬುದ್ಧಿಮಾಂದ್ಯರು, ಅಪ್ರಾಪ್ತರು ಮತ್ತು ಹೆಂಗಸರನ್ನು ಬಲವಂತವಾಗಿ ಮತಾಂತರ ಮಾಡಿದರೆ ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಲು ಪ್ರಸ್ತಾವನೆ ಮಾಡಲಾಗಿದೆ.

ಮತಾಂತರಕ್ಕೂ ಎರಡು ತಿಂಗಳು ಮುನ್ನ ಮತಾಂತರಗೊಳ್ಳುವ ವ್ಯಕ್ತಿಯು ಈ ಕುರಿತು ನೋಟಿಸ್‌ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ನೀಡಬೇಕಾಗುತ್ತದೆ. ಅದೇ ರೀತಿ, ಮತಾಂತರ ಮಾಡುವ ವ್ಯಕ್ತಿಯೂ ಸಹ ಈ ಬಗ್ಗೆ ಒಂದು ತಿಂಗಳಿಗೂ ಮುನ್ನ ಮ್ಯಾಜಿಸ್ಟ್ರೇಟ್‌ ಅವರಿಗೆ ನೋಟಿಸ್‌ ನೀಡಬೇಕಾಗುತ್ತದೆ.

ಮತಾಂತರಗೊಂಡ ನಂತರ ವ್ಯಕ್ತಿಯು ಒಂದು ತಿಂಗಳ ಒಳಗೆ ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಮಾಹಿತಿಯನ್ನು ನೀಡಬೇಕು. ತಪ್ಪಿದಲ್ಲಿ ಮತಾಂತರಗೊಂಡವರು ಹಾಗೂ ಮತಾಂತರ ಮಾಡಿದವರು ಇಬ್ಬರೂ ಜೈಲು ಸೇರಬೇಕಾಗುತ್ತದೆ.

ಸರ್ಕಾರಿ ಸವಲತ್ತು ಬಂದ್?:
ಮತಾಂತರಗೊಂಡ ನಂತರ ಒಂದೊಮ್ಮೆ ಆ ವ್ಯಕ್ತಿ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಜಾತಿ, ಧರ್ಮಗಳಿಗೆ ಸೇರಿದ್ದರೆ ಅವರಿಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮುಂತಾದವುಗಳಿಂದ ದೊರೆಯುವ ಸವಲತ್ತುಗಳನ್ನು ನಿಲ್ಲಿಸಲಾಗುತ್ತದೆ ಎನ್ನಲಾಗಿದೆ.

ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಮತಾಂತರ ಕಾಯಿದೆಗಳನ್ನು ಜಾರಿಗೆ ತಂದಿದ್ದು ರಾಜ್ಯ ಸರ್ಕಾರವು ಮಂಡಿಸಲು ಉದ್ದೇಶಿಸಿರುವ ಮಸೂದೆಯೂ ಆ ರಾಜ್ಯಗಳ ಕಾನೂನಿನ ನಕಲು ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಸೇರಿ 8 ವಿವಿಧ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಯನ್ನು ತರಿಸಿ ಶಾಸನ ರಚನೆ ಇಲಾಖೆ ಪರಿಶೀಲನೆ ನಡೆಸಿದೆ. ಕಾನೂನು ಇಲಾಖೆಯೂ ಇತರೆ ರಾಜ್ಯಗಳ ಕಾಯ್ದೆಯಲ್ಲಿನ ಕಾನೂನಾತ್ಮಕ ಅಂಶಗಳ ಬಗ್ಗೆ ಪರಿಗಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಮಾಧುಸ್ವಾಮಿ ಅವರು ಕರಡು ಪ್ರತಿಯನ್ನು ಪರಿಶೀಲಿಸಿದ್ದಾರೆ.

ಮತಾಂತರ ಮಸೂದೆ ಕಾಯ್ದೆ ಜಾರಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವಿವಿಧ ಮಠಾಧೀಶರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರು ಮತಾಂತರ ನಿಷೇಧದ ಖಾಸಗಿ ವಿಧೇಯಕವನ್ನು ಮಂಡಿಸಲು ಸಭಾಪತಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇನ್ನೊಂದೆಡೆ ಬೆಳಗಾವಿಯಲ್ಲಿ ಅಹಿತಕರ ಘಟನೆ ತಡೆಯಲು ಬೆಳಗಾವಿ ತಾಲೂಕಿನಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಬೆಳಗಾವಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಯಾವುದೇ ಪ್ರತಿಭಟನೆ, ಹೋರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments