ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬೈಎಲೆಕ್ಷನ್ ಗೆಲುವಿಗೆ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ಶತಾಯ-ಗತಾಯ ಮೂರೂ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಸದ್ಯದಲ್ಲೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿ ಸಲು ತೀರ್ಮಾನಿಸಿದೆ. ಪಕ್ಷದ ಕಚೇರಿಯಲ್ಲಿಂದು ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಹ ಉಸ್ತುವಾರಿ ಡಾ.ಅರುಣಾ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು.

ಸಭೆಯಲ್ಲಿ ಮಸ್ಕಿ, ಬಸವ ಕಲ್ಯಾಣ, ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆ ಮತ್ತು ಪಕ್ಷವನ್ನು ಸಂಘಟಿಸುವ ಕುರಿತಂತೆ ಚರ್ಚೆ ನಡೆಯಿತು. ಮುಖ್ಯವಾಗಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವ ಮೂರು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಿತಾದರೂ ಮತ್ತೊಮ್ಮೆ ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿ ಹೆಸರನ್ನು ಅಂತಿಮಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್‍ಗೆ ನೀಡಲಾಗಿದೆ.

ಮೂರೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿರುವುದರಿಂದ ಯಾರಿಗೇ ಟಿಕೆಟ್ ನೀಡಿದರೂ ಅಸಮಾಧಾನಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದೇ ಅಭ್ಯರ್ಥಿ ಘೋಷಣೆ ಮಾಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಸೋಮವಾರದೊಳಗೆ ಮೂರೂ ಕ್ಷೇತ್ರಗಳ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರ ಜತೆ ಸಭೆ ನಡೆಸಿ ನಂತರ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಕೊಟ್ಟಿರುವ ಮಾತಿನಂತೆ ರಾಯಚೂರು ಜಿಲ್ಲೆ, ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್‍ಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಪಕ್ಷಕ್ಕೆ ಸವಾಲಾಗಿರುವುದು ಬಸವ ಕಲ್ಯಾಣ ಮತ್ತು ಬೆಳಗಾವಿ. ಈ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲು ಪೈಪೋಟಿ ಹೆಚ್ಚಾಗಿರುವ ಕಾರಣ ಅಲ್ಲಿನ ಎಲ್ಲ ಮುಖಂಡರ ಜತೆ ಚರ್ಚಿಸಿದ ನಂತರವೇ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ಮುಂದಾಗಿದೆ.

ಬಸವ ಕಲ್ಯಾಣದಲ್ಲಿ ಮಾಜಿ ಸಚಿವ ದಿ. ನಾಗಮಾರಪಲ್ಲಿ ಪುತ್ರ ಸೂರ್ಯವಂಶಿ ನಾಗಮಾರಪಲ್ಲಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಹಲವಾರು ಆಕಾಂಕ್ಷಿಗಳಿದ್ದಾರೆ. ಒಂದು ಮೂಲದ ಪ್ರಕಾರ ಈ ಕ್ಷೇತ್ರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿಸಿದರೆ ಗೆಲ್ಲಬಹುದೆಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿಬಂದಿದೆ.

ಕ್ಷೇತ್ರದಲ್ಲಿ 40 ಸಾವಿರ ಮರಾಠ ಸಮುದಾಯದ ಮತಗಳಿರುವುದು ಈ ಸಮುದಾಯದ ಅಭಿವೃದ್ಧಿಗೆ ಬಿಎಸ್‍ವೈ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು, ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಅಧಿಕವಾಗಿರುವುದರಿಂದ ವಿಜಯೇಂದ್ರ ಅವರನ್ನೇ ಕಣಕ್ಕಿಳಿಸುವ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ಉಳಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿ.ಸುರೇಶ್ ಅಂಗಡಿ ಪತ್ನಿ, ಪುತ್ರಿ ಶ್ರದ್ಧಾ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಮತ್ತಿತರ ಹೆಸರುಗಳು ಕೇಳಿಬಂದಿವೆ.

ಒಂದೆರಡು ದಿನಗಳಲ್ಲಿ ಮೂರೂ ಕ್ಷೇತ್ರಗಳ ಮುಖಂಡರ ಸಭೆ ಕರೆದು ಅಭ್ಯರ್ಥಿಗಳ ಹೆಸರನ್ನು ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments