ಭಾರತದಲ್ಲಿ 4 ವಾರಗಳಿಂದ ಚೇತರಿಕೆ ಪ್ರಮಾಣ ಸತತ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.6- ದೇಶದಲ್ಲಿ ಕೊರೊನಾ ವೈರಸ್ ಗಂಡಾಂತರದ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಒಂದೆಡೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ರೋಗಿಗಳ ಚೇತರಿಕೆ ಪ್ರಮಾಣದಲ್ಲಿಯೂ 28 ದಿನಗಳಿಂದ ಗಮನಾರ್ಹ ವೃದ್ಧಿ ಕಂಡುಬಂದಿದೆ.

ನಿನ್ನೆ ಮಧ್ಯರಾತ್ರಿವರೆಗೆ ಭಾರತದಲ್ಲಿ 2.53 ಲಕ್ಷಕ್ಕೂ ಅಧಿಕ ಆಕ್ಟೀವ್ ಕೇಸ್‍ಗಳು ಹಾಗೂ 4.24 ಲಕ್ಷಕ್ಕೂ ಹೆಚ್ಚು ರಿಕವರಿ ರೇಟ್ (ಶೇ.60.85) ವರದಿಯಾಗಿದೆ. ರೋಗಿಗಳ ಚೇತರಿಕೆ ಮತ್ತು ಗುಣಮುಖ ಪ್ರಮಾಣದಲ್ಲಿ ಸತತ 4 ವಾರಗಳಿಂದಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಇದು ಆತಂಕದ ನಡುವೆಯೂ ಸ್ವಲ್ಪ ಸಮಾಧಾನ ಮೂಡಿಸಿದೆ.

ಕೊರೊನಾ ವೈರಸ್ ಸೋಂಕಿನ ರೋಗಿಗಳ ಚೇತರಿಕೆ ಪ್ರಕರಣಗಳ ಸಂಖ್ಯೆ 4.25 ಲಕ್ಷ ಸನಿಹದಲ್ಲಿರುವುದು ಸಮಾಧಾನದ ಸಂಗತಿ. ನಿನ್ನೆ ಮಧ್ಯರಾತ್ರಿವರೆಗೆ 4,24,432 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 2,53,287 ಮಂದಿಯಲ್ಲಿ ಸಕ್ರಿಯ ಸೋಂಕು ಕಾಣಿಸಿಕೊಂಡಿದೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.60.85ರಷ್ಟು ವೃದ್ದಿ ಕಂಡುಬಂದಿದೆ. ಸತತ ನಾಲ್ಕು ವಾರಗಳಿಗೂ ಹೆಚ್ಚು ಕಾಲದಿಂದ ರಿಕವರಿ ರೇಟ್‍ನಲ್ಲಿ ಏರಿಕೆ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಈ ನಡುವೆ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಔಷಧಿ ಕಂಡುಹಿಡಿಯುವ ಕಾರ್ಯವೂ ಪ್ರಗತಿಯಲ್ಲಿದ್ದರೂ, ಈ ವರ್ಷಾಂತ್ಯದ ವೇಳೆಗೆ ಅಂಗಿತ ಫಲಿತಾಂಶ ಲಭಿಸುವ ಸಾಧ್ಯತೆ ಇದೆ.

Facebook Comments