ಬೆಂಗಳೂರಿಗರೇ ಮತ್ತೊಮ್ಮೆ ಕೊರೋನಾ ಸಂಕಷ್ಟ ಎದುರಿಸಲು ತಯಾರಾಗಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.23- ನಗರದಲ್ಲಿ ಮತ್ತೆ ಕೊರೊನಾ ಸ್ಫೋಟ ಭೀತಿ ಎದುರಾಗಿದೆ. ಬೆಳ್ಳಂದೂರು ವಾರ್ಡ್‍ನ ಅಪಾರ್ಟ್‍ಮೆಂಟ್‍ನ 500 ಮಂದಿಯ ಕೋವಿಡ್-19 ವರದಿ ಇಂದು ಸಂಜೆ ಬರಲಿದ್ದು, ಹೆಚ್ಚು ಮಂದಿಗೆ ಪಾಸಿಟಿವ್ ಕಂಡುಬಂದರೆ ನಗರದಲ್ಲಿ ಮತ್ತೆ ಕೊರೊನಾ ಅಲರ್ಟ್ ಘೋಷಣೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 15 ರಿಂದ 22ರ ಅವಧಿಯಲ್ಲಿ ಬೆಳ್ಳಂದೂರು ವಾರ್ಡ್, ಅಂಬಲಿಪುರದ ಎಸ್‍ಜೆಆರ್ ವಾಟರ್‍ಮಾರ್ಕ್ ಅಪಾರ್ಟ್‍ಮೆಂಟ್‍ನಲ್ಲಿ 100 ಮಂದಿಗೆ ಕೊರೊನಾ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇದಕ್ಕೂ ಮೊದಲು ಮಂಜುಶ್ರೀ ನರ್ಸಿಂಗ್ ಹೋಂನ 40 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಪತ್ತೆಯಾಗಿದ್ದು, ಅಲ್ಲೂ ಕೂಡ ಬಿಬಿಎಂಪಿ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈಗ ಈ ಅಪಾರ್ಟ್‍ಮೆಂಟ್‍ಗೆ ಸಂಬಂಧಪಟ್ಟ 500 ಮಂದಿಯ ಸ್ಯಾಂಪಲ್ಸ್‍ಅನ್ನು ಲ್ಯಾಬ್‍ಗೆ ಕಳುಹಿಸಲಾಗಿದ್ದು, ಅದರ ವರದಿ
ಇಂದು ಸಂಜೆ ಬರಲಿದೆ.

ಹೆಚ್ಚು ಜನರಿಗೆ ಪಾಸಿಟಿವ್ ಇರುವುದು ಪತ್ತೆಯಾದರೆ ಮತ್ತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಲ್ಲದೆ ನಗರದಲ್ಲಿರುವ ಎಲ್ಲ ಅಪಾರ್ಟ್‍ಮೆಂಟ್‍ಗಳ ಮೇಲೆ ತೀವ್ರ ನಿಗಾ ವಹಿಸಬೇಕಾಗುತ್ತದೆ. ಈಗಾಗಲೇ ಆರೋಗ್ಯ ಸಚಿವರಾದ ಸುಧಾಕರ್ ಅವರು ಐದು ಜನರಿಗಿಂತ ಹೆಚ್ಚು ಪಾಸಿಟಿವ್ ಇರುವುದು ಪತ್ತೆಯಾದ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ಎಲ್ಲ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ.

ಇಂದು ಸಂಜೆ 500 ಜನರ ವರದಿ ನಿರೀಕ್ಷಿಸಲಾಗಿದ್ದು, ವರದಿಯಲ್ಲಿ ಹೆಚ್ಚು ಜನರಿಗೇನಾದರೂ ಕೊರೊನಾ ಇರುವುದು ಪತ್ತೆಯಾದರೆ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತದೆ ಎಂಬ ಆತಂಕ ಎದುರಾಗಿದೆ. ಹಾಗೇನಾದರೂ ಆದರೆ ಎರಡನೆ ಅಲೆ ಎದುರಿಸಲು ನಾವು ಸಜ್ಜಾಗಬೇಕಿದೆ. ಈಗಾಗಲೇ ಗಡಿ ಪ್ರದೇಶಗಳಲ್ಲಿ, ಗಡಿ ಭಾಗಗಳಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮದುವೆ, ಧಾರ್ಮಿಕ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಡಲು ಮಾರ್ಷಲ್‍ಗಳನ್ನು ನೇಮಕ ಮಾಡಲಾಗಿದೆ. ಲಾಕ್‍ಡೌನ್, ಸೀಲ್‍ಡೌನ್ ಸಂದರ್ಭಗಳಲ್ಲಿ ಜನರಿಗೆ ಸಾಕಷ್ಟು ಸಂಕಷ್ಟ ಎದುರಾಗಿದ್ದು, ಮತ್ತೆ ಅಂತಹ ಸಂಕಷ್ಟಗಳು ಎದುರಾಗಬಾರದೆಂದರೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಮಾಸ್ಕ್ , ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದೆಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Facebook Comments