ಇಂದು ಮತ್ತೆ 10 ಮಂದಿಯಲ್ಲಿ ಕೊರೋನಾ ಪತ್ತೆ, 200 ದಾಟಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.10- ಮೈಸೂರಿನಲ್ಲಿ ಐದು, ಬೆಂಗಳೂರಿನಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಬ್ಬರು, ಕಲ್ಬುರ್ಗಿಯಲ್ಲಿ ಒಬ್ಬರು ಸೇರಿದಂತೆ ಇಂದು ಹೊಸದಾಗಿ 10 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.

ನಿನ್ನೆಯವರೆಗೂ 197 ಮಂದಿಗೆ ಸೋಂಕಿರುವುದು ಖಚಿತವಾಗಿತ್ತು. ಇಂದು ಅದು 207ಕ್ಕೇ ಏರಿಕೆಯಾಗಿದೆ. ದೆಹಲಿಯಿಂದ ಬಂದಿದ್ದ ವ್ಯಕ್ತಿಯ ಸಂಪರ್ಕದ ಕಾರಣಕ್ಕೆ ಕಲ್ಬುರ್ಗಿ ಜಿಲ್ಲೆಯ 55 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯದ ವಿಷಯವೆಂದರೆ ದೆಹಲಿಯಿಂದ ವಾಪಾಸಾಗಿರುವ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನಲ್ಲಿ ಸೋಂಕು ಪತ್ತೆಯಾಗಿಲ್ಲ. ಆದರೂ ಮತ್ತೊಬ್ಬರಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.

167 ಮತ್ತು 168ರ ಸಂಪರ್ಕದ ಕಾರಣಕ್ಕೆ ಬೆಂಗಳೂರಿನಲ್ಲಿ 48 ವರ್ಷದ ಪಿ 198, 57 ವರ್ಷದ ಪಿ 199 ಸೋಂಕಿಗೆ ಸಿಲುಕಿದ್ದಾರೆ. ಇನ್ನೂ ಮೈಸೂರಿನಲ್ಲಿ 159 ಮತ್ತು 103 ರೋಗಿಗಳ ಸಂಪರ್ಕದ ಕಾರಣಕ್ಕೆ ಅವರ 8 ವರ್ಷದ ಮಗನಿಗೂ ಸೋಂಕು ಕಾಣಿಸಿಕೊಂಡಿದೆ. ಅತ್ತೆಯ ಸಂಪರ್ಕದ ಕಾರಣಕ್ಕೆ 48 ವರ್ಷದ ಮಹಿಳೆಗೆ, ನಂಜನಗೂಡು ಔಷಧಿ ಕಂಪೆನಿಯ ಉದ್ಯೋಗಿಯ ಸಂಪರ್ಕದ ಕಾರಣಕ್ಕೆ 33 ವರ್ಷದ ವ್ಯಕ್ತಿಗೆ, ಪತಿಯ ಸಂಪರ್ಕದ ಕಾರಣಕ್ಕೆ 28 ವರ್ಷದ ಪತ್ನಿಗೆ, ಪಿ 183ರ ಸಂಪರ್ಕದ ಕಾರಣಕ್ಕೆ ಅವರ ಪತ್ನಿ 48 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಿ 169ರ ಸಂಪರ್ಕದ ಕಾರಣಕ್ಕೆ 35 ವರ್ಷದ ಸಹೋದರನಿಗೆ, ಪಿ 206 ಸಂಪರ್ಕದ ಕಾರಣಕ್ಕೆ 11 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ಆಯಾ ಜಿಲ್ಲೆಗಳ ಆಸ್ಪತ್ರೆಗೆ ದಾಖಲಿಸಲಾಗಿದೆ.

Facebook Comments

Sri Raghav

Admin