ಬೇಕಾಬಿಟ್ಟಿ ಬಿಬಿಎಂಪಿ, ಕೊರೊನಾ ಹೆಚ್ಚಾಗುತ್ತಿದ್ದರೂ ವಲಸಿಗರನ್ನು ಕೇಳೋರಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ನಿನ್ನೆಯಷ್ಟೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಕೊರೊನಾ ಸೋಂಕು ತಡೆಗಟ್ಟಿ ನಗರದಲ್ಲಿರುವ ಆತಂಕ ನಿವಾರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದರು. ಆದರೆ, ಹೊರರಾಜ್ಯಗಳಿಂದ ಪ್ರವಾಸಿಗರು ಬರುತ್ತಲೇ ಇದ್ದಾರೆ. ಇವರನ್ನು ಕೇಳುವವರೇ ಇಲ್ಲ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಸಾಕಷ್ಟು ಮಂದಿ ಬರುತ್ತಿದ್ದಾರೆ. ಆದರೆ, ಇವರ ಬಳಿ ಕೊರೊನಾ ನೆಗೆಟಿವ್ ವರದಿ ಇಲ್ಲ. ಜತೆಗೆ ಯಾವುದೇ ಅಧಿಕಾರಿಗಳೂ ಇವರನ್ನು ಪ್ರಶ್ನೆ ಮಾಡುತ್ತಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದುವರಿದಿದ್ದು, ಕೊರೊನಾ ತಡೆಯುವಲ್ಲಿ ಬಿಬಿಎಂಪಿ ನಿಯಂತ್ರಣ ಕಳೆದುಕೊಂಡಿದೆ.

ರೈಲುಗಳ ಮೂಲಕವಷ್ಟೇ ಅಲ್ಲ, ಬಸ್‍ಗಳ ಮುಖಾಂತರವೂ ಕೇರಳ, ಮಹಾರಾಷ್ಟ್ರ ಮತ್ತಿತರೆಡೆಯಿಂದ ಜನ ಬರುತ್ತಿದ್ದಾರೆ. ಆ ರಾಜ್ಯಗಳಲ್ಲಿ ಈಗಾಗಲೇ ಕೊರೊನಾ ಮಿತಿಮೀರಿದೆ. ಹೀಗೆ ಅಲ್ಲಿಂದ ಜನ ಬರುತ್ತಲೇ ಇದ್ದರೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ಬೆಂಗಳೂರು ಏನಾಗುವುದೋ ಆ ದೇವರೇ ಬಲ್ಲ.

ನಗರದಲ್ಲಿ ಕೊರೊನಾ ಸೋಂಕು ತಡೆಯಲು ಈಜುಕೊಳ, ಉದ್ಯಾನವನಗಳಲ್ಲಿರುವ ಜಿಮ್‍ಗಳನ್ನು ಮುಚ್ಚಲು ಬಿಬಿಎಂಪಿ ಪ್ಲಾನ್ ಮಾಡಿದೆ. ಆದರೆ, ಮುಖ್ಯವಾಗಿ ಕೊರೊನಾ ಹೊತ್ತು ತರುತ್ತಿರುವ ಪ್ರಯಾಣಿಕರಿಗೆ ಬ್ರೇಕ್ ಇಲ್ಲದಂತಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದಲೇ ನಮ್ಮ ರಾಜ್ಯಕ್ಕೆ ಸಂಕಷ್ಟ ಎಂದು ಸರ್ಕಾರವೇ ಹೇಳಿದೆ. ಜತೆಗೆ ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿ ವರದಿ ತರಬೇಕೆಂದೂ ಆದೇಶ ಕೊಟ್ಟಿದೆ.

ಇಷ್ಟೆಲ್ಲ ಆದರೂ ಬಿಬಿಎಂಪಿ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಗರ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಹೊರರಾಜ್ಯಗಳಿಂದ ಬರುವವರ ನೆಗೆಟಿವ್ ರಿಪೋರ್ಟ್ ಕೇಳುವವರೇ ಇಲ್ಲದಂತಾಗಿದೆ. ನಗರದಲ್ಲಿ ಕೋವಿಡ್ ಸ್ಫೋಟವಾಗುವ ಮುನ್ನ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸೋಂಕು ತಡೆಯಲು ಸಮರೋಪಾದಿ ಕ್ರಮ ತೆಗೆದುಕೊಳ್ಳಬೇಕಿದೆ.

Facebook Comments