ಕೊರೊನಾ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 11- ರಾಜ್ಯ ಸರ್ಕಾರ ಈ ಮೊದಲು ಕೊರೊನಾ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು, ಈಗ ಸೋಂಕಿನ ಪರೀಕ್ಷೆಗಳನ್ನೇ ಕಡಿಮೆ ಮಾಡುವ ಮೂಲಕ ಸೋಂಕಿತರ ಸಂಖ್ಯೆಯನ್ನು ಕಡಿಮೆ ತೋರಿಸಲು ಪ್ರಯತ್ನಿಸಲಾಗಿದೆ.

ಸೋಂಕಿತರ ಸಂಖ್ಯೆಯನ್ನು ಮುಚ್ಚಿಡಲು ಸರ್ಕಾರ ಪರೀಕ್ಷೆಯನ್ನು ಕಡಿಮೆ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕರು ನಿನ್ನೆಯಿಂದಲೂ ಆರೋಪಿಸುತ್ತಿದ್ದರು. ಅದಕ್ಕೆ ಪೂರಕವಾಗಿ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಯಲ್ಲೇ ಪರೀಕ್ಷಾ ಪ್ರಮಾಣ ಕಡಿಮೆಯಾಗಿರುವುದು ಖಾತ್ರಿಯಾಗಿದೆ.

ಮೇ 6ರವರೆಗೂ ದಿನನಿತ್ಯ ಕನಿಷ್ಟ 10 ಸಾವಿರ ಮಂದಿಯನ್ನು ಹೆಚ್ಚಿನದಾಗಿ ಪರೀಕ್ಷೆ ಸೇರ್ಪಡೆ ಮಾಡಲಾಗುತ್ತಿತ್ತು. ಅನಂತರ ಗಣನೀಯವಾಗಿ ಪರೀಕ್ಷಾ ಸಂಖ್ಯೆಯನ್ನು ಇಳಿಮುಖ ಮಾಡಲಾಗಿದೆ. ಬೇರೆ ಬೇರೆ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲು ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಒಂದೆರಡು ದಿನಗಳಲ್ಲೇ ಕರ್ನಾಟಕ ಇತರ ರಾಜ್ಯಗಳನ್ನು ಹಿಂದಿಕ್ಕಿ ಕೋವಿಡ್ ಸೋಂಕಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದು ಅಪಕೀರ್ತಿಗೆ ಪಾತ್ರವಾಗಲಿದೆ ಎಂಬುದನ್ನು ಮನಗಂಡ ಸರ್ಕಾರ ಪರೀಕ್ಷಾ ಸಂಖ್ಯೆಯನ್ನೇ ಹಂತ ಹಂತವಾಗಿ ಕಡಿತ ಮಾಡುತ್ತಾ ಬಂದಿದೆ.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರವೇ ಮೇ 6ರಂದು ಹಿಂದಿನ ದಿನಕ್ಕಿಂತ 9,217ಮಂದಿಗೆ ಹೆಚ್ಚಿನ ಪರೀಕ್ಷೆ ನಡೆಸಲಾಗಿತ್ತು. ನಂತರದ ದಿನದಲ್ಲಿ ಹಿಂದಿನ ದಿನಕ್ಕಿಂತ 5,539 ಮಂದಿಗಿಂತ ಕಡಿಮೆ ಪರೀಕ್ಷೆ ಮಾಡಲಾಗಿದೆ. ಮೇ 8ರಂದು 1,875, ಮೇ 9ರಂದು 10,536 ಮಂದಿಯನ್ನು ಕಡಿಮೆ ಮಾಡಲಾಗಿದ್ದು, ನಿನ್ನೆ ಹಿಂದಿನ ದಿನಕ್ಕಿಂತಲೂ 22,381 ಮಂದಿಗೆ ಕಡಿಮೆ ಪರೀಕ್ಷೆ ಮಾಡಲಾಗಿದೆ.

ಮೇ 5ರಂದು 1.55 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 50,112 ಮಂದಿ ಸೋಂಕಿತರು ಪತ್ತೆಯಾಗಿದ್ದರು, ಸೋಂಕು ಹರಡುವಿಕೆಯ ಪ್ರಮಾಣ ಶೇ>32.28ರಷ್ಟಿತ್ತು, 346 ಮಂದಿ ಸಾವನ್ನಪ್ಪಿದ್ದು, ಮರಣದ ಪ್ರಮಾಣ ಶೇ.0.69ರಷ್ಟಿತ್ತು.

ಸರ್ಕಾರ ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಸೋಂಕಿತರ ಪ್ರಮಾಣವನ್ನು ತಗ್ಗಿಸಿರುವುದಾಗಿ ಹೇಳಿಕೊಂಡಿದ್ದರು, ಸಾವಿನ ಪ್ರಮಾಣದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೆಚ್ಚು ಪ್ರಾಣ ಹಾನಿಯಾಗಿದೆ.

ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಮೇ 6ರಂದು 1.64 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, 49,058 ಮಂದಿ ಸೋಂಕಿತರು ಪತ್ತೆಯಾಗಿದ್ದರು, ಸೋಂಕು ಹರಡುವಿಕೆಯ ಪ್ರಮಾಣ ಶೇ.29.83ರಷ್ಟಿತ್ತು, 328 ಮಂದಿ ಸಾವನ್ನಪ್ಪಿದ್ದು, ಮರಣದ ಪ್ರಮಾಣ ಶೇ.0.66ರಷ್ಟಿತ್ತು,

ಮೇ 7ರಂದು 1.58 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 48,781 ಮಂದಿ ಸೋಂಕಿತರು ಪತ್ತೆಯಾಗಿದ್ದು, ಸೋಂಕು ಹರಡುವಿಕೆಯ ಪ್ರಮಾಣ ಶೇ.30.69ರಷ್ಟಿತ್ತು, ಸಾವಿನ ಪ್ರಮಾಣ ಶೇ.1.21ರಷ್ಟಿದ್ದು, 592 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಮೇ 8ರಂದು 1,57,027 ಮಂದಿಯನ್ನು ಪರೀಕ್ಷೆ ನಡೆಸಿದ್ದು, 47 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು, ಸೋಂಕು ಹರಡುವಿಕೆಯ ಪ್ರಮಾಣ ಶೇ 30.28ರಷ್ಟಿತ್ತು. 482 ಮಂದಿ ಸಾವನ್ನಪ್ಪಿದ್ದು, ಅದರ ಪ್ರಮಾಣ ಶೇ1.01ರಷ್ಟಿತ್ತು.

ಮೇ 9 ರಂದು 1,46,491 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಅದರಲ್ಲಿ 47,930 ಮಂದಿ ಸೋಂಕಿತರ ಪತ್ತೆಯಾಗಿದ್ದರು. ಸೋಂಕು ಹರಡುವ ಪ್ರಮಾಣ ಶೇ.32.71ರಷ್ಟಿದ್ದು, ಸಾವಿನ ಪ್ರಮಾಣ ಶೇ.1.02ರಷ್ಟಿತ್ತು. 490 ಮಂದಿ ಸಾವನ್ನಪ್ಪಿದ್ದರು.

ಮೇ 10ರಂದು 1,24,110 ಮಂದಿಯನ್ನು ಮಾತ್ರ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 39,305 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕು ಹರಡುವಿಕೆಯ ಪ್ರಮಾಣ ಶೇ 31.66ರಷ್ಟಿದೆ. ಸಾವಿನ ಪ್ರಮಾಣ ಶೇ.1.51ರಷ್ಟಿದ್ದು 596 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನೂ ಬೆಂಗಳೂರಿನಲ್ಲೂ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಮೇ 1ರಂದು 62,904 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 19,353 ಮಂದಿ ಸೋಂಕಿತರು ಪತ್ತೆಯಾಗಿದ್ದರು, 162 ಮಂದಿ ಪ್ರಾಣ ಕಳದುಕೊಂಡಿದ್ದರು. ಸೋಂಕು ಹರಡುವಿಕೆಯ ಪ್ರಮಾಣ ಶೇ.30.77ರಷ್ಟಿತ್ತು.

ಮೇ 2ರಂದು 55,709 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದರೆ 21,199 ಮಂದಿ ಸೋಂಕಿತರು ಪತ್ತೆಯಾಗಿದ್ದರು, 64 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಸೋಂಕು ಹರಡುವಿಕೆಯ ಪ್ರಮಾಣ ಶೇ>38.05ರಷ್ಟಿತ್ತು, ಮೇ 3ರಂದು 40,128 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 22,112ಮಂದಿ ಸೋಂಕಿತರು ಪತ್ತೆಯಾಗಿದ್ದರು, 115 ಮಂದಿ ಜೀವ ಹಾನಿಯಾಗಿದ್ದರೆ, ಸೋಂಕು ಹರಡುವ ಪ್ರಮಾಣ ಶೇ.55.10ರಷ್ಟಿತ್ತು.

ಮೇ 4ರಂದು 63,506 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 20,870 ಮಂದಿ ಸೋಂಕಿತರು ಪತ್ತೆಯಾಗಿದ್ದರು, 132 ಮಂದಿ ಪ್ರಾಣ ಕಳೆದುಕೊಂಡಿದ್ದರೆ ಸೋಂಕು ಹರಡುವ ಪ್ರಮಾಣ ಶೇ.32.86ರಷ್ಟಿತ್ತು, ಮೇ 5ರಂದು 59,368 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ 23,106 ಮಂದಿ ಸೋಂಕಿತರಿದ್ದರು, 161 ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಸೋಂಕಿನ ಪ್ರಮಾಣ 38.92ರಷ್ಟಿತ್ತು.

ಮೇ 6ರಂದು 60,944 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ 23,706 ಮಂದಿ ಸೋಂಕಿತರು ಪತ್ತೆಯಾಗಿದ್ದರು, 139 ಮಂದಿ ಸಾವನ್ನಪ್ಪಿದ್ದರೆ, ಶೇ.38.90ರಷ್ಟು ಸೋಂಕು ಹರಡುವಿಕೆಯಿತ್ತು. ಮೇ ರಂದು 60 ಸಾವಿರ, ಮೇ 8 ಮತ್ತು 9ರಂದು ಕ್ರಮವಾಗಿ 57 ಹಾಗೂ 51 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 20 ಸಾವಿರಕ್ಕಿಂತ ಹೆಚ್ಚಿನ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಬೆಂಗಳೂರಿನಲ್ಲೂ ಮೇ 6ರ ನಂತರ ಪರೀಕ್ಷೆ ಮಾಡುವ ಸಂಖ್ಯೆಯನ್ನು ಕಡಿತ ಮಾಡಲಾರಂಭಿಸಿದೆ. ಭಾನುವಾರ 51,772 ಮಂದಿಯನ್ನು ಪರೀಕ್ಷೆಗೆ ಒಳಡಿಸಿದ್ದರೆ ಸೋಮವಾರ 32,862 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಪ್ರಮಾಣವನ್ನು 19 ಸಾವಿರ ಮಂದಿಗೆ ಕಡಿತ ಮಾಡಿದ್ದರಿಂದ ಸೋಂಕಿತರ ಸಂಖ್ಯೆಲ್ಲೂ ನಾಲ್ಕರಿಂದ ಐದು ಸಾವಿರ ಕಡಿಮೆಯಾಗಿದೆ.

ಆದರೆ ಸಾವಿನ ಪ್ರಮಾಣದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಲಾಗಿದೆ. ನಿನ್ನೆ ಒಂದೇ ದಿನ 374 ಮಂದಿ ಬೆಂಗಳೂರಿನಲ್ಲಿ ಜೀವ ಕಳೆದುಕೊಂಡಿದ್ದಾರೆ.

Facebook Comments