ಕೊರೊನಾ ಪೀಡಿತ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಇಎಸ್‍ಐ ಸೌಲಭ್ಯ ಇರುವ ಕಾರ್ಮಿಕರು ಕೊರೊನಾ ಸೋಂಕು ಪೀಡಿತರಾದರೆ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ 28 ದಿನಗಳ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಈ ಬಗ್ಗೆ ಕಾಇ 170 ಸ್ಟೀಮರ 2018(ಭಾ-5)ರಲ್ಲಿ ಸುತ್ತೋಲೆ ಹೊರಡಿಸಲಾಗಿದ್ದು, ವೈರಸ್ ಬಾಧಿತ ಕಾರ್ಮಿಕರಿಗೆ ರಜೆ ನೀಡಬೇಕು.

ಒಂದು ವೇಳೆ ಸೋಂಕಿತರಿಗೆ ಇಎಸ್‍ಐ ಸೌಲಭ್ಯ ಇಲ್ಲದಿದ್ದರೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15(3)ರ ಅನ್ವಯ 28 ದಿನಗಳ ವೇತನ ಸಹಿತ ರಜೆ ನೀಡಬೇಕು ಎಂದು ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ಕೊರೊನಾ ಬಾಧಿತರಿಗೆ 28 ದಿನಗಳ ರಜೆಯ ಅಗತ್ಯ ಇದೆ. ಹಾಗಾಗಿ ಇಎಸ್‍ಐ ಸೌಲಭ್ಯ ಇರುವ ಕಾರ್ಮಿಕರಿಗೆ ಸಂಸ್ಥೆಗಳು ರಜೆ ನೀಡಬೇಕು.

ಸೋಂಕಿತ ಕಾರ್ಮಿಕರು ತಮ್ಮ ಹತ್ತಿರದ ಇಎಸ್‍ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳಿಂದ ಪ್ರಮಾಣ ಪತ್ರ ಪಡೆದು ತಮ್ಮ ಸಂಸ್ಥೆಗೆ ಸಲ್ಲಿಸಬೇಕು. ಪ್ರಮಾಣ ಪತ್ರ ಪಡೆಯಲು ಬರುವ ಕಾರ್ಮಿಕರನ್ನು ಕಾಯಿಸದೆ ತುರ್ತಾಗಿ ಪರಿಶೀಲನೆ ನಡೆಸಿ ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸಿಆರ್‍ಪಿಸಿ ಕಾಯ್ದೆ ಕಲಂ 144ರ ಅನ್ವಯ ಜಿಲ್ಲಾಧಿಕಾರಿಗಳು ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿದ್ದು, ಅದರಂತೆ ಕೊರೊನಾ ವೈರಸ್ ಬಾಧಿತ ವ್ಯಕ್ತಿಗಳು ಇತರರ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆ ಸೂಚಿಸಿದೆ.

Facebook Comments