ಇಂದಿನಿಂದ ಮೇ 17ರ ವರೆಗೆ ಬಿಎಂಟಿಸಿ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 15- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇಂದಿನಿಂದ ಮೇ 17ರ ವರೆಗೆ ಪ್ರತಿ ವಲಯದಲ್ಲಿ 100 ರಿಂದ 150 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಸೂಚಿಸಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಎಲ್ಲ ಸಿಬ್ಬಂದಿಯನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಆವಶ್ಯಕವಾಗಿದ್ದು, ಅದಕ್ಕಾಗಿ ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ.

ಇಂದಿನಿಂದ ಬೆಳಗ್ಗೆ 9.30 ಯಿಂದ ಸಂಜೆ 5.30ರ ವರೆಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ಬಿಎಂಟಿಸಿ (ಭದ್ರತಾ ಮತ್ತು ಜಾಗ್ರತಾ) ನಿರ್ದೇಶಕರು ತಿಳಿಸಿದ್ದಾರೆ.

ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ ದಕ್ಷಿಣ ವಲಯದ ಶಾಂತಿನಗರ ಆಸ್ಪತ್ರೆ, ಶಾಂತಿನಗರ ಟಿಟಿಎಂಸಿ, ಹೆಣ್ಣೂರು ಘಟಕ, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತಲಾ 150 ಮಂದಿ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ನಿಯೋಜಿಸುವಂತೆ ಸೂಚಿಸಿದ್ದಾರೆ.

ಯಶವಂತಪುರ ಟಿಟಿಎಂಸಿಯಲ್ಲಿ 100 ಹಾಗೂ ಕೆಂಗೇರಿ ಟಿಟಿಎಂಸಿಯಲ್ಲಿ 125 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದ್ದು, ಪ್ರತಿ ವೈದ್ಯಕೀಯ ತಪಾಸಣಾ ಕೇಂದ್ರಕ್ಕೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ತಪಾಸಣೆಗೆ ಹಾಜರಾಗುವ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

Facebook Comments

Sri Raghav

Admin