ಕೊರೊನಾ ಚಿಕಿತ್ಸೆಗಾಗಿ ದಂಪತಿಯ ಪರದಾಟ, 30 ಗಂಟೆಗಳ ಬಳಿಕ ಆಸ್ಪತ್ರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.28- ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗಿದವರ ಹೃದಯವಿದ್ರಾವಕ ಘಟನೆಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಕೊರೊನಾ ಸೋಂಕು ಇರುವುದು ಖಚಿತವಾದ ಬಳಿಕವೂ ಸುಮಾರು 30 ಗಂಟೆಗಳ ಕಾಲ ಆಸ್ಪತ್ರೆಗೆ ಸೇರಲಾಗದೆ ಮನೆಯಲ್ಲೇ ಅಂಗೈಯಲ್ಲಿ ಜೀವ ಹಿಡಿದುಕೊಂಡು ಮಕ್ಕಳೊಂದಿಗೆ ದಂಪತಿ ಕ್ಷಣ ಕ್ಷಣಕ್ಕೂ ವಿಲವಿಲನೆ ಒದ್ದಾಡಿದ್ದಾರೆ.

ಬಿಟಿಎಂ ಲೇಔಟ್‍ನಲ್ಲಿ ಪ್ರಿಟಿಂಗ್‍ಪ್ರೆಸ್ ನಡೆಸುತ್ತಿದ್ದ ಉದ್ಯಮಿಯ ಪತ್ನಿಗೆ ಬುಧವಾರ ಮೈಕೈ ನೋವು ಮತ್ತು ಜ್ವರ ಕಾಣಿಸಿಕೊಂಡಿದೆ. ತಕ್ಷಣವೇ ಖಾಸಗಿ ಕ್ಲಿನಿಕ್‍ಗೆ ಹೋಗಿ ತೋರಿಸಿದಾಗ ಚಿಕಿತ್ಸೆ ನೀಡಿದ್ದಾರೆ. ಯಾವುದಕ್ಕೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ಮಾಡಿದ್ದಾರೆ.

ಅದರಂತೆ ಖಾಸಗಿ ಆಸ್ಪತ್ರೆಗೆ ಹೋಗಿ ತಲಾ ಐದು ಸಾವಿರ ರೂಗಳಂತೆ 10 ಸಾವಿರ ರೂ. ಪಾವತಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಲಾಗಿದೆ. ಶುಕ್ರವಾರ ಪರೀಕ್ಷೆ ಮಾಡಿಸಿದ್ದು, ಶನಿವಾರ ವರದಿ ಬಂದಿದೆ. ಗಂಡ, ಹೆಂಡತಿ ಇಬ್ಬರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ತಕ್ಷಣವೇ ಉದ್ಯಮಿ ಪೊಲೀಸರಿಗೆ, ತಮಗೆ ತಿಳಿದ ರಾಜಕಾರಣಿಗಳಿಗೆ, ಬಿಬಿಎಂಪಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಮಗೆ ಇಬ್ಬರು ಮಕ್ಕಳಿದ್ದು, ಅವರಿಗೂ ತೊಂದರೆಯಾಗಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ಎಷ್ಟೇ ಬಡಿದುಕೊಂಡರೂ ಬಿಬಿಎಂಪಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಫೋನ್ ಮಾಡಿ ಆರೋಗ್ಯ ವಿಚಾರಿಸಿಕೊಂಡು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಆದರೆ ರಾಜಕಾರಣಿಯೊಬ್ಬರು ಸಂಕಷ್ಟದ ಸಮಯದಲ್ಲೂ ರಾಜಕಾರಣ ಮಾತನಾಡಿದ್ದಾರೆ. ನೀವು ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬೆಂಬಲಿಸಲಿಲ್ಲ. ಕಷ್ಟ ಕಾಲದಲ್ಲಿ ನೆನಪಿಸಿಕೊಳ್ಳುತ್ತಿದ್ದೀರಾ ಎಂದು ಕುಹಕವಾಡಿದ್ದಾರೆ.

ಮಕ್ಕಳೊಂದಿಗೆ ಮನೆಯಲ್ಲಿಯೇ ಇದ್ದರೇ ಅನಾಹುತವಾಗಬಹುದೆಂದು ನೇರವಾಗಿ ತಾವೇ ಆಸ್ಪತ್ರೆಗೆ ದಾಖಲಾಗಲು ಹೊರಟರೆ ಬಿಬಿಎಂಪಿಯ ಸಿಬ್ಬಂದಿಗಳು ಬಾಗಿಲಿಗೆ ಬಂದು ಅಡ್ಡ ನಿಂತಿದ್ದಾರೆ. ಆ್ಯಂಬುಲೆನ್ಸ್ ಬರಲಿದೆ. ನಿಮ್ಮನ್ನು ನಾವೇ ಕರೆದುಕೊಂಡು ಹೋಗುತ್ತೇವೆ ನೀವಾಗೇ ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.

24 ಗಂಟೆಗಳ ಕಾಲ ಆ್ಯಂಬುಲೆನ್ಸ್‍ಗಾಗಿ ಕಾದು ಕಾದು ದಂಪತಿ ಸುಸ್ತಾಗಿದ್ದಾರೆ. ಒಂದು ಹಂತದಲ್ಲಿ ಉಸಿರಾಟದ ಸಮಸ್ಯೆ ತೀವ್ರವಾದಾಗ ಮಾಸ್ಕ್ ತೆಗೆದು ಉಸಿರಾಡುವಂತೆ vನ್‍ನಲ್ಲೆ ಸಲಹೆ ಸಿಕ್ಕಿದೆ. ಕಷಾಯ ಕುಡಿದು ಹಾಗುಹೀಗೂ ಧೈರ್ಯದಿಂದ ಕಾಲ ನೂಕಿದ್ದಾರೆ.

ನಿನ್ನೆ ರಾತ್ರಿ 11.30ಕ್ಕೆ ಬಿಬಿಎಂಪಿಯ ಆ್ಯಂಬುಲೆನ್ಸ್ ಬಂದು ದಂಪತಿಯ ಮಕ್ಕಳ ಪೈಕಿ 15 ವರ್ಷದ ಪುತ್ರಿಯನ್ನು ಹಾಗೂ ಅವರ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ಸಿಬ್ಬಂದಿಯನ್ನು ಕರೆದುಕೊಂಡು ಹೋಟೆಲ್ ಕ್ವಾರಂಟೈನ್‍ಗೆ ಬಿಟ್ಟಿದ್ದಾರೆ. ಹೋಟೆಲ್‍ನಲ್ಲಿ ಇಂದು ಬೆಳಗ್ಗೆಯಿಂದ ಕುಡಿಯಲು ನೀರಿಲ್ಲ.

11 ಗಂಟೆಗೆ ತಿಂಡಿ ಕೊಟ್ಟಿದ್ದಾರೆ. ಒಂದು ಗಂಟೆ ನಂತರ ಒಂದೇ ಲೋಟದಲ್ಲಿ ಎಲ್ಲರಿಗೂ ಕುಡಿಯಲು ನೀರು ಕೊಡುತ್ತಿದ್ದಾರೆ ಎಂದು ಪುತ್ರಿ ಮತ್ತು ಸಿಬ್ಬಂದಿಗಳು ಫೋನ್ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಉದ್ಯಮಿ ಬಿಬಿಎಂಪಿ ಅಧಿಕಾರಿಗಳ ಬಳಿ ಮಾತನಾಡಿದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಪ್ರತ್ಯುತ್ತರ ಸಿಕ್ಕಿದೆ. ಭಾನುವಾರ 1 ಗಂಟೆ ಸುಮಾರಿಗೆ ಆಗಮಿಸಿದ ಬಿಬಿಎಂಪಿಯ ಆ್ಯಂಬುಲೆನ್ಸ್ ಸೋಂಕಿತರಿಬ್ಬರನ್ನು ಹತ್ತಿಸಿಕೊಂಡು ಕರೆದೊಯ್ದಿದೆ. ಆದರೆ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳದೆ ಸುಮಾರು ಹೊತ್ತು ಸುತ್ತಾಡಿಸಿದ್ದಾರೆ.

ನನಗೆ ಆರೋಗ್ಯ ವಿಮೆ ಇದೆ. ಯಾವುದೇ ಖಾಸಗಿ ಆಸ್ಪತ್ರೆಯಾದರೂ ಚಿಂತೆಯಿಲ್ಲ ಎಂದು ಉದ್ಯಮಿ ಬಿಡಿಸಿ ಹೇಳಿದರೂ ಬಿಬಿಎಂಪಿಯವರು ಕಿವಿ ಮೇಲೆ ಹಾಕಿಕೊಂಡಿಲ್ಲ. ತಮ್ಮಷ್ಟಕ್ಕೇ ತಾವು ಮಾಡಿದ್ದನ್ನೇ ಮಾಡುತ್ತಿದ್ದಾರೆ ಎಂದು ಉದ್ಯಮಿ ಈ ಸಂಜೆ ಜೊತೆ ಅಳಲು ತೋಡಿಕೊಂಡಿದ್ದಾರೆ.

ಇದು ಯಾವುದೋ ಒಂದು ಕುಟುಂಬ, ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಬೆಂಗಳೂರಿನಲ್ಲಿ ಸೋಂಕಿಗೆ ಸಿಲುಕಿರುವ ಪ್ರತಿಯೊಬ್ಬರ ಪರಿಸ್ಥಿತಿಯೂ ಇದೇ ರೀತಿ ಇದೆ.

Facebook Comments