ಖಾಸಗಿ ಆಸ್ಪತ್ರೆಗಳ ಕಳ್ಳಾಟ : ಒಪ್ಪಂದವಾಗಿ ವಾರ ಕಳೆದರು ಸರ್ಕಾರಕ್ಕೆ ಬೆಡ್ ಹಸ್ತಾಂತರಿಸಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.6- ಕೊರೊನಾ ಮಹಾಮಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಹಾದಿಬೀದಿಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಹಾಸಿಗೆಯಿದ್ದರೂ ನೀಡದೆ ನಿರ್ಧಯವಾಗಿ ವರ್ತಿಸುತ್ತಿವೆ.

ಕಳೆದ ವಾರ ನಡೆದ ಒಪ್ಪಂದದಂತೆ ಖಾಸಗಿ ಆಸ್ಪತ್ರೆಗಳು 4500 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು 2500 ಸೇರಿದಂತೆ ಒಟ್ಟು 7000 ಹಾಸಿಗೆಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬೆಂಗಳೂರಿನಲ್ಲೇ ಒಟ್ಟು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಆಸ್ಪತ್ರೆಗಳು ಹಾಸಿಗೆಯನ್ನು ನೀಡಲು ಒಪ್ಪಿಕೊಂಡಿದ್ದವು.

ಒಪ್ಪಂದವಾಗಿ ವಾರ ಕಳೆದರೂ ಈವರೆಗೂ ಖಾಸಗಿಯವರು ಸರ್ಕಾರಕ್ಕೆ ನೀಡಿರುವುದು ಕೇವಲ 120 ಹಾಸಿಗೆಗಳನ್ನು ಮಾತ್ರ. ಪರಿಣಾಮ ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಉಸಿರಾಟದ ತೊಂದರೆ, ಹೃದಯ ಬಡಿತ, ತಲೆನೋವು, ಆಯಾಸ ಹೆಚ್ಚಳ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಎಲ್ಲೆಂದರಲ್ಲಿ ಪ್ರಾಣ ಬಿಡುತ್ತಿದ್ದಾರೆ.

ಅಷ್ಟಕ್ಕೂ ಖಾಸಗಿಯವರು ಸರ್ಕಾರಕ್ಕೆ ಹಾಸಿಗೆ ಒದಗಿಸಲು ನಿರಾಕರಿಸುತ್ತಿರುವುದರ ಹಿಂದೆ ಲಾಭಿವೊಂದು ಕೆಲಸ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.  ರಾಜ್ಯ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರ ಖಾಸಗಿ ಆಸ್ಪತ್ರೆಗಳು ಸೋಂಕು ಪೀಡಿತರಿಗೆ ಅಷ್ಟೇ ದರದಲ್ಲಿ ಚಿಕಿತ್ಸೆ ನೀಡಬೇಕು. ಕನಿಷ್ಠವೆಂದರೆ ಅದು 2ರಿಂದ ಮೂರು ಲಕ್ಷ ವೆಚ್ಚವಾಗುತ್ತದೆ.

ಖಾಸಗಿಯವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಕನಿಷ್ಠ 6ರಿಂದ 8 ಲಕ್ಷದವರೆಗೂ ಚಿಕಿತ್ಸೆ ನೀಡಬಹುದು. ಸರ್ಕಾರ ಹೇಳಿದಂತೆ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಟ್ಟರೆ ತಮ್ಮ ಆದಾಯಕ್ಕೆ ಎಲ್ಲಿ ಖೋತಾ ಬೀಳಬಹುದೆಂಬ ದುರಾಸೆಯಿಂದಲೇ ಖಾಸಗಿಯವರು ಹಾಸಿಗೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.

ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿನ್ನೆಯಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸೋಂಕು ಪೀಡಿತರಿಗೆ ಖಾಸಗಿಯವರು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಆದರೆ ಸರ್ಕಾರದ ಯಾವುದೇ ಎಚ್ಚರಿಕೆಗೂ ಕ್ಯಾರೆ ಎನ್ನದ ಖಾಸಗಿಯವರು ಒಪ್ಪಂದದಂತೆ ಹಾಸಿಗೆಗಳನ್ನು ನೀಡದೆ ಚೌಕಾಸಿ ಮಾಡುತ್ತಿದ್ದಾರೆ. ಸಚಿವರು ಆಸ್ಪತ್ರೆಗಳಲ್ಲಿ ಬೆಡ್‍ಗಳಿಗೆ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಮಾತ್ರ ಬೆಡ್ ಸಿಗದೇ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ.

ಉದ್ಯಾನ ನಗರಿಯಲ್ಲಿ ಗುಣಮುಖರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವಾರದಿಂದ ದಾಖಲೆಯ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 5,238 ಮಂದಿ ಸೋಂಕಿತರು ದಾಖಲಾಗಿದ್ದಾರೆ. ಆದರೆ, ಡಿಸ್ಚಾರ್ಜ್ ಆದವರ ಸಂಖ್ಯೆ ಮಾತ್ರ ಕೇವಲ 244 ಮಂದಿ ಅಷ್ಟೇ. ಇತ್ತ ಮೂರು ದಿನ ಶೂನ್ಯ ಸಂಖ್ಯೆಯಲ್ಲಿದೆ.

ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಡಿಸ್ಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಸೋಂಕು ಕಾಣಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ 1 ವಾರಗಳ ಚಿಕಿತ್ಸೆ ನೀಡಲಾಗುತ್ತೆ. ಡಿಸ್ಚಾಜ್ರ್ಗೂ ಮುನ್ನ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಬಂದ ನಂತರ ಮನೆಗೆ ಕಳುಹಿಸಲಾಗುತ್ತದೆ. ಆದರೆ, ನಗರದ ಹಲವು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಪದೇಪದೆ ಪರೀಕ್ಷೆ ನಡೆಸಿದ್ರೂ ಪಾಸಿಟಿವ್ ಬರುತ್ತಿದೆ.

ಆದರೆ, ಅವರಿಗೆ ಯಾವುದೇ ರೋಗ ಲಕ್ಷಣಗಳಾಗಲಿ, ಉಸಿರಾಟದ ತೊಂದರೆಯಾಗಲಿ ಇಲ್ಲ. ಪೂರ್ತಿ ಸರಿ ಇದ್ದರೂ ಅವರನ್ನು ಪರೀಕ್ಷೆ ನಡೆಸಿದಾಗ ಪಾಸಿಟಿವ್ ರಿಪೋರ್ಟ್ ಬರುತ್ತಿದೆ. ಹೀಗಾಗಿ ಅಂಥವರನ್ನ ಡಿಸ್ಚಾರ್ಜ್ ಮಾಡುವುದಕ್ಕೆ ಆಗುತ್ತಿಲ್ಲ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.

ಹೀಗಾಗಿ ಸೋಂಕಿತರು ಬೇಗ ಗುಣಮುಖರಾಗಿ ಡಿಸ್ಚಾರ್ಜ್ ಆದರೆ ಹೊಸ ಸೋಂಕಿತರಿಗೆ ಬೆಡ್ ಸಿಗಲಿದೆ. ಆದರೆ, ಕೊರೊನಾ ದಿನೇದಿನೆ ಹೊಸ ಹೊಸ ರೂಪ ಪಡೆಯುತ್ತಿರುವುದು ಕಗ್ಗಂಟಾಗಿದೆ.

ನಿನ್ನೆ ದಾಖಲಾಗಿದ್ದ 69.8% (1,345 ಪ್ರಕರಣಗಳು) ಯಾವುದೇ ಸಂಪರ್ಕ ಅಥವಾ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎನ್ನುವುದು ಆತಂಕಕಾರಿ ವಿಚಾರ. ರಾಜ್ಯದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 23,474ಕ್ಕೆ ತಲುಪಿದ್ದರೆ ನಿನ್ನೆ ಒಂದೇ ದಿನ ರಾಜಧಾನಿ ಬೆಂಗಳೂರಿನಲ್ಲಿ 1,235 ಹೊಸ ಪ್ರಕರಣಗಳು ವರದಿಯಾಗಿತ್ತು.

Facebook Comments