3ನೇ ಡೋಸ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ: ಸಚಿವ ಅಶ್ವಥ್ ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ 2ನೇ ಹಂತದ ಲಸಿಕೆಯನ್ನು ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. 3ನೇ ಡೋಸ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಮೊದಲ ಮತ್ತು 2ನೇ ಡೋಸ್ ಲಸಿಕೆ ನೀಡುವ ಬಗ್ಗೆ ನಾವು ಗಮನಹರಿಸಿದ್ದೇವೆ. 3ನೇ ಹಂತದ ಲಸಿಕೆ ನೀಡುವ ಬಗ್ಗೆ ಯಾವೊಬ್ಬ ತಜ್ಞರು ಸಲಹೆಯನ್ನು ಕೊಟ್ಟಿಲ್ಲ. ಹಾಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ನ್ಯೂಟ್ರಲೈಸ್ ಆ್ಯಂಟಿ ಬಾಡಿ ಕಡಿಮೆಯಾಗಿಲ್ಲ. ಆದಾಗ ಮಾತ್ರ ನೋಡೋಣ. ಸದ್ಯ ಮೊದಲು ಮತ್ತು ಎರಡನೇ ಡೋಸ್ ಬಗ್ಗೆ ಮಾತ್ರ ನೀಡುವ ಕೆಲಸ ಆಗಲಿದೆ. ಮುಂದೆ ಚರ್ಚೆಗೆ ಬಂದರೆ ನೋಡೋಣ ಎಂದರು. ಭಾರತ ಮೂಗಿನ ಮೇಲೆ ಬೆರಳಿಡುವಂಥ ಕೆಲಸ ಮಾಡಿದೆ. ಕೋವಿಡ್‍ನಂತ ಮಹಾಮಾರಿ ನಿಯಂತ್ರಣ ಮಾಡಲು ಪರಿಹಾರ ಲಸಿಕೆ. ಲಸಿಕೆಯನ್ನು ದೇಶದ ಜನತೆಗೆ ನೀಡಿದ್ದು, ನೂರು ಕೋಟಿ ಲಸಿಕೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಜನವರಿ 16ರಿಂದ ಲಸಿಕೆ ಪೂರೈಸುವ ಕಾರ್ಯಕ್ರಮ ನಡೆಯಿತು. ವೈದ್ಯರಿಗೆ, ನಂತರ ಹಿರಿಯ ನಾಗರಿಕರಿಗೆ, 45, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು.ಇದು ಬಹಳಷ್ಟು ಹೆಮ್ಮೆ ಪಡುವ ಸಂಗತಿ ಎಂದು ಹೇಳಿದರು. ಪ್ರಧಾನಿ ಮೋದಿಯವರ ನಾಯಕತ್ವದ, ಬಲಿಷ್ಠ ಭಾರತ ಅಂತ ವಿಶ್ವಕ್ಕೆ ಪ್ರದರ್ಶನ ಮಾಡಲಾಗಿದೆ. ಇದು ಯಶಸ್ವಿಯಾಗಲು ನಮ್ಮ ನಾಗರೀಕರು ಕಾರಣ. ಇನ್ನೂ ಅನೇಕರು ಲಸಿಕೆ ತೆಗೆದುಕೊಂಡಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ.20ರಷ್ಟೂ ಪೂರ್ಣಗೊಂಡಿಲ್ಲ ಎಂದು ಮಾಹಿತಿ ನೀಡಿದರು.

365 ದಿನ, 24ಗಂಟೆ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಎಲ್ಲಿಯೂ ಲಸಿಕೆ ಕೊರತೆ ಇಲ್ಲ. ಇಷ್ಟು ಲಸಿಕೆಯನ್ನು ಉಚಿತವಾಗಿ ನೀಡಿದ ದೇಶವೆಂದರೆ ಭಾರತವೊಂದೇ ಎಂದರು. ರಾಜ್ಯದಲ್ಲಿ ಇದುವರೆಗೆ 4.15 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 2.5 ಕೋಟಿ ಜನರಿಗೆ ಎರಡೂ ಡೋಸ್ ಕೊಡಲಾಗಿದೆ. ಉಳಿದ ಅರ್ಹರಿಗೆ ಮನೆಮನೆಗೂ ತೆರಳಿ ಲಸಿಕೆ ಹಾಕಲಾಗುತ್ತಿದೆ. ಸದ್ಯಕ್ಕಂತೂ ಮೂರನೇ ಡೋಸ್ ಅಗತ್ಯವಿಲ್ಲ. ಇದರಲ್ಲಿ ಸಕಲರನ್ನೂ ಸಮಾನವಾಗಿ ಪರಿಗಣಿಸಲಾಗಿದೆ ಎಂದರು.

135 ಕೋಟಿ ಜನರಿರುವ ದೇಶದಲ್ಲಿ ಕೊರೋನಾದಿಂದ ಸಾವಿಗೀಡಾದವರ ಮತ್ತು ಸೋಂಕಿತರ ಸಂಖ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಸಾಧನೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಮಾಸ್ಕ್, ಕಿಟ್, ವೆಂಟಿಲೇಟರ್, ಆಕ್ಸಿಜನ್ ಎಲ್ಲದರ ಸವಾಲುಗಳಿತ್ತು. ನಮ್ಮ ದೇಶದಲ್ಲಿ ಎಲ್ಲವನ್ನೂ ತಯಾರು ಮಾಡುವ ಕೆಲಸ ಮಾಡಲಾಯಿತು. ಲಸಿಕೆಯಿಂದ ಹಿಡಿದು, ಎಲ್ಲವನ್ನೂ ವಿದೇಶಕ್ಕೆ ರಫ್ತು ಮಾಡುವ ಕೆಲಸವನ್ನೂ ಮಾಡಲಾಗಿದೆ.ರಾಜ್ಯದಲ್ಲೂ ಉತ್ತಮ ಸಾಧನೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೋವಿಡ್ ಸಂಕಷ್ಟದಿಂದ ಬಳಲಿದ್ದ ರಾಜ್ಯ ಈಗ ಹಂತ ಹಂತವಾಗಿ ಆರ್ಥಿಕ ಚೇತರಿಕೆ ಆಗುತ್ತಿದೆ. ಎಲ್ಲಾ ವಹಿವಾಟುಗಳು ಆರಂಭವಾಗುತ್ತಿದೆ. ಜನರು ಉದ್ಯೋಗಕ್ಕೆ ಮರಳುತ್ತಿದ್ದಾರೆ. ಸೋಂಕಿತರ ಪರ್ಸೆಂಟೇಜ್‍ನಲ್ಲಿ ಹೆಚ್ಚಿದ್ದು, ಸಾವಿನ ಸಂಖ್ಯೆಯ ನಿರ್ವಹಣೆ ಕೂಡ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಗಳು, ನಾಗರಿಕರ ಸಹಕಾರ ದೊರೆತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಾದ ಡಾ.ಅಂಕಿತ್, ಡಾ.ಶಶಿ, ಡಾ.ಆದೀಶ್ವರ ಮತ್ತು ಪೌರಕಾರ್ಮಿಕರಾದ ರಮ್ಯಾ ಹಾಗೂ ಸೆಲ್ವಿ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾರಾಯಣ, ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಮತ್ತು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಮಂಜುನಾಥ್ ಇದ್ದರು.

Facebook Comments