ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಪ್ರಾಣ ಉಳಿಸಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.2-ಕೋಟಿ ಕೋಟಿ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ಕೊರೊನಾ ಮಹಾಮಾರಿಗೆ ಯಾವುದೆ ಮದ್ದಿಲ್ಲ. ಹೀಗಾಗಿ ಸೋಂಕಿನಿಂದ ಪ್ರಾಣ ಉಳಿಸಿಕೊಳ್ಳಬೇಕಾದರೆ ಲಸಿಕೆ ಹಾಕಿಸಿಕೊಳ್ಳದೆ ಬೇರೆ ದಾರಿಯೇ ಇಲ್ಲ. ನೀವು, ನಿಮ್ಮ ಕುಟುಂಬ ರಕ್ಷಣೆ ಮಾಡಿಕೊಳ್ಳಬೇಕಾದರೆ ತಪ್ಪದೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಪ್ರಾಣ ಉಳಿಸಿಕೊಳ್ಳಿ. ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕಲು ತೀರ್ಮಾನಿಸಿದೆ. ಆದರೆ, ಎಲ್ಲರಿಗೂ ಸರ್ಕಾರಿ ಲಸಿಕೆ ಸಿಗಲು ಸ್ವಲ್ಪ ವಿಳಂಬವಾಗುತ್ತಿದೆ.

ಪ್ರಾಣಕ್ಕಿಂತ ಯಾವುದು ದೊಡ್ಡದಲ್ಲ. ಲಸಿಕೆ ಕುರಿತಂತೆ ಯಾರು ಏನೇ ಹೇಳಿದರೂ ಅದಕ್ಕೆ ಕಿಮ್ಮತ್ತು ನೀಡಬೇಡಿ. ನಿಮ್ಮ ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಭ್ಯವಿರುವ ಲಸಿಕೆ ಹಾಕಿಸಿಕೊಂಡು ನೆಮ್ಮದಿಯಾಗಿರಿ. ಒಂದು ವೇಳೆ ನಿಮಗೆ ಸರ್ಕಾರಿ ಲಸಿಕೆ ಸಿಗದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಭ್ಯವಿರುವ ಲಸಿಕೆ ಹಾಕಿಸಿಕೊಳ್ಳಿ, ನಿಮ್ಮ ಜೀವ ಕಾಪಾಡಿಕೊಳ್ಳಿ.

ಕೇವಲ 750 ರೂ.ಗಳಿಂದ 1250 ರೂ.ಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆಗಳು ಲಭಿಸುತ್ತಿವೆ. ತಕ್ಷಣ ತಡ ಮಾಡದೆ ಆಸ್ಪತ್ರೆಗಳಿಗೆ ತೆರಳಿ ನಿಮ್ಮಿಚ್ಚೆಯ ಲಸಿಕೆ ಹಾಕಿಸಿಕೊಳ್ಳಲು ಹಿಂದುಮುಂದೂ ನೋಡಬೇಡಿ. ನೀವು ಮಾಡುವ ಒಂದು ತಪ್ಪು ನಿರ್ಧಾರ ನಿಮ್ಮ ಪ್ರಾಣಕ್ಕೆ ಮಾರಕವಾಗಿ ಪರಿಣಮಿಸುವ ಮುನ್ನ ಎಚ್ಚರವಹಿಸುವುದು ಸೂಕ್ತ. ಇಲ್ಲದಿದ್ದಲ್ಲಿ ಭಾರಿ ಬೆಲೆ ತೆರಬೇಕಾದ ಸನ್ನಿವೇಶ ಎದುರಾಗಬಹುದು ಇರಲಿ ಎಚ್ಚರ.

ಕೊರೊನಾ ಮಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿಶ್ವದೆಲ್ಲೇಡೆ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು. ಹೀಗಾಗಿ ಆ ಸಂದರ್ಭದಲ್ಲಿ ಹೆಚ್ಚಿನ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಆದರೆ, ಎರಡನೆ ಅಲೆ ಆರಂಭದಲ್ಲಿ ಜನ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮ ಅದೆಷ್ಟೋ ಅಮಾಯಕ ಜೀವಗಳು ಬಲಿಯಾದ ದೃಶ್ಯಗಳು ನಮ್ಮ ಕಣ್ಣ ಮುಂದಿವೆ.
ಕೊರೊನಾದಿಂದ ಜೀವ ಕಳೆದುಕೊಂಡ ತಮ್ಮವರ ಅಂತ್ಯಸಂಸ್ಕಾರ ನಡೆಸಲು ಅವಕಾಶ ಸಿಗದೆ ದೂರದಲ್ಲಿ ನಿಂತು ಅನಾಥರ ಸಂಸ್ಕಾರ ನಡೆಸುವಂತೆ ತಮ್ಮವರ ಶವಸಂಸ್ಕಾರ ನೋಡಿಕೊಂಡು ಮನೆಗೆ ವಾಪಾಸ್ಸಾಗುವಂತಹ ಕರುಳು ಹಿಂಡುವ ಪ್ರಕರಣಗಳು ನಮ್ಮ ಕಣ್ಣಾಲಿಗಳಲ್ಲಿ ನೀರು ತರಿಸಿವೆ.

ಅಂತಹ ಪರಿಸ್ಥಿತಿ ಯಾರಿಗೂ ಬರಬಾರದಪ್ಪ ಎಂದು ನಾವು ಕಾಣದ ದೇವರಿಗೆ ಹರಕೆ ಕಟ್ಟಿದ್ದೇವೆ. ಮತ್ತೆ ಅಂತಹದ್ದೇ ತಪ್ಪು ಮರುಕಳಿಸಬಾರದು ಎಂದಾದರೆ ಮೀನಾಮೇಷÀ ಎಣಿಸದೆ ಲಸಿಕೆ ಹಾಕಿಸಿಕೊಂಡು ಪ್ರಾಣ ಉಳಿಸಿಕೊಳ್ಳುವುದೇ ಸೂಕ್ತ. ಮೂರನೇ ಅಲೆ ಆಪಾಯ: ಎರಡನೆ ಅಲೆ ಸಂದರ್ಭದಲ್ಲಿ ಸಂಭವಿಸಿದ ಸಾವಿರಾರು ಸಾವಿನ ಪ್ರಕರಣಗಳ ನಂತರ ಲಾಕ್‍ಡೌನ್ ಮಾಡಲಾಯಿತು. ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ಅನ್‍ಲಾಕ್ ಮಾಡಿರುವುದು ಮೂರನೇ ಅಲೆಯ ಆಪಾಯಕ್ಕೆ ನಾವೇ ಆಹ್ವಾನ ಕೊಟ್ಟಂತಾಗಿದೆ.

ಜನ ಕೊರೊನಾ ನಿಯಮಗಳನ್ನು ಮೀರಿ ಜನಸಂದಣಿ ಪ್ರದೇಶಗಳು, ಮಾರುಕಟ್ಟೆಗಳಿಗೆ ತೆರಳುತ್ತಿರುವುದರಿಂದ ಹಾದಿಯಲ್ಲಿ ಹೋಗುವ ಮಹಾಮಾರಿಯನ್ನು ಮನೆಗಳಿಗೆ ಕರೆದುಕೊಂಡು ಬರುವಂತಾಗಿದೆ. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಅಲ್ಲಿನ ಸಾವಿರಾರು ಮಂದಿ ಪ್ರತಿನಿತ್ಯ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ನಮ್ಮಲ್ಲೂ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ರೈಲು ನಿಲ್ದಾಣಗಳು, ಬಸ್ ತಾಣಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಡೇಂಜರ್ ವಾರ್ಡ್‍ಗಳು: ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದರೂ ನಗರದ ಹತ್ತು ವಾರ್ಡ್‍ಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬೇಗೂರು, ಹೊರಮಾವು, ಹಗದೂರು, ವರ್ತೂರು, ಹೂಡಿ, ಬೆಳ್ಳಂದೂರು, ಆರ್.ಆರ್.ನಗರ, ಸಂಜಯ್‍ನಗರ, ಕಾಡುಗೋಡಿ, ಉತ್ತರಹಳ್ಳಿ ವಾರ್ಡ್‍ಗಳಲ್ಲಿ ಸೋಂಕು ಪ್ರಮಾಣ ಮೀತಿ ಮೀರುತ್ತಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ.

ಸೋಂಕು ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಕಂಟೈನ್‍ಮೆಂಟ್ ಜೋನ್ ಸ್ಥಾಪನೆ ಮಾಡುವುದು. ಸೋಂಕಿತರ ಮನೆ ಮುಂದೆ ರೆಡ್ ಅಲರ್ಟ್ ಬೋರ್ಡ್ ಅಳವಡಿಸುವುದು, ಸೋಂಕಿತರು ಹಾಗೂ ಸಂಪರ್ಕಿತರ ಕೈಗೆ ಸ್ಟಾಂಪ್ ಹಾಕಲಾಗುತ್ತಿದೆ. ಮೂರು ಕೋಟಿ ಲಸಿಕೆ: ರಾಜ್ಯದಾದ್ಯಂತ ನಿನ್ನೆಯವರೆಗೆ ಮೂರು ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 73 ಲಕ್ಷ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ವಿಜಯಪುರ ಹಾಗೂ ಎಲ್ಲಾ 31 ಜಿಲ್ಲೆಗಳಲ್ಲಿ ಮೂರು ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ.

ಇನ್ನು ಲಸಿಕಾ ಆಂದೋಲನ ಮುಂದುವರೆದಿದ್ದು, ಲಸಿಕೆ ಹಾಕಿಸಿಕೊಳ್ಳದಿರುವವರು ತಡ ಮಾಡದೆ ಲಸಿಕೆ ಹಾಕಿಸಿಕೊಂಡು ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತದಿಂದ ಪಾರಾಗಲು ಸಿದ್ದರಾಗಬೇಕಿದೆ. ಮಕ್ಕಳಿಗೂ ಲಸಿಕೆ: ಇದುವರೆಗೂ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ. 18 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಕೆಲವು ಲಸಿಕಾ ಸಂಸ್ಥೆಗಳು ಅನುಮತಿಗಾಗಿ ಕಾಯುತ್ತಿವೆ. ಎಲ್ಲ ಅಂದುಕೊಂಡಂತೆ ಆದರೆ, ಕೆಲವೇ ದಿನಗಳಲ್ಲಿ ಮಕ್ಕಳ ಮೇಲಿನ ಲಸಿಕಾ ಪ್ರಯೋಗಕ್ಕೂ ಅನುಮತಿ ಸಿಗುವ ಸಾಧ್ಯತೆ ಇದೆ.

ಮಕ್ಕಳಿಗೆ ಲಸಿಕೆ ಹಾಕಿಸಲು ಅನುಮತಿ ದೊರೆತ ಕೂಡಲೇ ನಿಮ್ಮ ಮಕ್ಕಳಿಗೂ ಲಸಿಕೆ ಹಾಕಿಸಿ. ಅಲ್ಲಿಯವರೆಗೆ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವುದು ಸೂಕ್ತ.
ಒಂದು ವೇಳೆ ನಿಮ್ಮ ಮಕ್ಕಳಿಗೆ ಜ್ವರ, ಶೀತ, ತಲೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಮಕ್ಕಳ ವೈದ್ಯರು ಭೇಟಿ ಮಾಡಿ ತಪಾಸಣೆ ನಡೆಸಿಕೊಳ್ಳುವುದು ಒಳಿತು.
ಒಟ್ಟಾರೆ, ಇಡೀ ವಿಶ್ವವನ್ನೆ ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿಗೆ ಕಡಿವಾಣ ಹಾಕಲು ಇರುವ ರಾಮಬಾಣವೆಂದರೆ ಅದು ಲಸಿಕೆ ಮಾತ್ರ ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ನಿಮ್ಮ ಅಮೂಲ್ಯವಾದ ಪ್ರಾಣವನ್ನು ರಕ್ಷಿಸಿಕೊಳ್ಳಿ.

Facebook Comments