ಕಿಲ್ಲರ್ ಕೊರೊನಾಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವುದು ಯಾವಾಗ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 25- ವಿಶ್ವದಾದ್ಯಂತ 3.46 ಲಕ್ಷ ಜನರನ್ನು ಬಲಿ ತೆಗೆದುಕೊಂಡು 55 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗದಿಂದ ನರಳಾಡುತ್ತಿರುವಂತೆ ಮಾಡಿರುವ ಕಿಲ್ಲರ್ ಕೊರೊನಾ ವೈರಸ್ ನಿಗ್ರಹಕ್ಕಾಗಿ ಇಡೀ ವಿಶ್ವವೇ ಒಗ್ಗೂಡಿ ಹೋರಾಡುತ್ತಿದ್ದರೂ, ಹೆಮ್ಮಾರಿ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ.

ವಿಶ್ವದ ಬಹುತೇಕ 200 ರಾಷ್ಟ್ರಗಳು ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ನಿರಂತರ ಸಂಶೋಧನೆಯಲ್ಲಿ ತೊಡಗಿದ್ದರೂ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಔಷಧಿ ಮತ್ತು ಲಸಿಕೆಗಳನ್ನು ಅನ್ವೇಷಣೆ ಮಾಡಿ ಪ್ರಯೋಗಕ್ಕೆ ಒಳಪಡಿಸಿವೆ.

ಆದರೆ ಈ ಔಷಧಿಗಳು ಪರಿಣಾಮಕಾರಿಯಾಗಿ ಕೊರೊನಾ ನಿರ್ಮೂಲನೆಗೆ ಇನ್ನು ಸಮರ್ಥವಾಗಿ ಬಳಕೆಯಾಗಿಲ್ಲ. ಇಲಿ, ಹಂದಿ, ಮಂಗ ಮತ್ತು ಮನುಷ್ಯರ ಮೇಲೂ ಹೊಸ ಔಷಧಿಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ.

ಕೆಲವು ಲಸಿಕೆಗಳು ಪೂರಕ ಫಲಿತಾಂಶಗಳನ್ನು ನೀಡಿದ್ದರೂ ಇವು ಇನ್ನು ಕೆಲವು ಹಂತಗಳ ಕ್ಲಿನಿಕಲ್ ಟ್ರಯಲ್(ಪ್ರಯೋಗಾರ್ಥ ಪರೀಕ್ಷೆಗೆ)ಗೆ ಒಳಪಡಬೇಕಾಗಿದೆ.ಅಮೆರಿಕಾದಲ್ಲಿ ಅನ್ವೇಷಣೆ ಮಾಡಲಾಗಿರುವ ಮಡೆರ್ನಾ ಕಂಪೆನಿಯ ಲಸಿಕೆ ಕೊರೊನಾವನ್ನು ನಾಶಪಡಿಸಲು ಆಶಾ ಭಾವನೆ ಮೂಡಿಸಿದೆಯಾದರೂ ಇದು ಮತ್ತಷ್ಟು ಹಂತಗಳ ಪ್ರಯೋಗಕ್ಕೆ ಒಳಪಡಬೇಕಾಗಿದೆ. ಈಗಾಗಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಲಕ್ಷಾಂತರ ಡಾಲರ್ ಹಣವನ್ನು ಹೊಸ ಲಸಿಕೆಗಾಗಿ ವ್ಯಯ ಮಾಡಿದೆ.

ಭಾರತ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ , ಇಟಲಿ, ಇಸ್ರೇಲ್, ಬಾಂಗ್ಲಾ ದೇಶ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ವೈರಸ್ ನಿಗ್ರಹಕ್ಕಾಗಿ ಔಷಧಿ ಮತ್ತುಲಸಿಕೆಗಳನ್ನು ಅಭಿವೃದ್ಧಿಪಡಿಸಿವೆಯಾದರೂ ನಿಖರ ಫಲಿತಾಂಶ ದೃಢಪಡಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಅಸಮಾಧಾನಕರ ಸಂಗತಿ.

Facebook Comments