ಬೆಂಗಳೂರಲ್ಲಿ ಭಯದ ಬದುಕು, ಮೂಲೆಮೂಲೆಗೂ ಕಿಲ್ಲರ್ ಕೊರೋನಾ ಎಂಟ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6- ಕೊರೊನಾ…ಕೊರೊನಾ… ಕೊರೊನಾ… ಹಿಂಡುತ್ತಿದೆ ಜನರ ಪ್ರಾಣ. ದಿನೇ ದಿನೇ ಏರುತ್ತಿದೆ ಸೋಂಕು… ಸಾವಿನ ಸಂಖ್ಯೆ… ನಮಗೇನಾಗುತ್ತದೆಯೋ ಎಂಬ ಆತಂಕದಲ್ಲಿ ಬದುಕು ದೂಡುತ್ತಿರುವ ಜನ…  ಅತ್ತ ಆಸ್ಪತ್ರೆಗಳಲ್ಲಿ ಸೋಂಕಿತರ ನಿತ್ಯ ನರಕಯಾತನೆ. ರೋಗಿಗಳ ಸಂಖ್ಯೆ ಉಲ್ಬಣ. ಆಸ್ಪತ್ರೆಗಳನ್ನು ಸೇರಲು ಸೋಂಕಿತರ ಧಾವಂತ. ಹುಷಾರಾಗುತ್ತೇವೋ… ಇಲ್ಲವೋ… ಎಂಬ ಅನುಮಾನ ಸೋಂಕಿತರು, ಶಂಕಿತರಲ್ಲಿ ಭೀತಿ…

ಆ್ಯಂಬುಲೆನ್ಸ್‍ಗಳ ನಿರಂತರ ಓಡಾಟ… ರೋಗಿಗಳ ತೊಳಲಾಟ… ಚಿಕಿತ್ಸೆಗಾಗಿ ಅಲೆದಾಟ… ಮೃತಪಟ್ಟವರ ಅಂತಿಮ ದರ್ಶನಕ್ಕೆ ಸಂಬಂಧಿಗಳ ಪರದಾಟ… ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮತ್ತೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಗಂಟುಮೂಟೆ ಕಟ್ಟಿಕೊಂಡು ಗುಳೆ ಹೊರಟ ಸನ್ನಿವೇಶ…  ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರು ಚಿಕಿತ್ಸೆಗಾಗಿ ಅಲೆದಾಟ… ಮತ್ತೊಂದೆಡೆ ಕೊರೊನಾ ನಿರ್ವಹಣೆ ವಹಿಸಿಕೊಳ್ಳಲು ರಾಜಕಾರಣಿಗಳಲ್ಲಿ ಪೈಪೋಟಿ… ಆಡಳಿತ, ಪ್ರತಿಪಕ್ಷಗಳ ನಡುವೆ ಗುದ್ದಾಟ… ಒಟ್ಟಾರೆ ಕಳೆದ ಮೂರು ತಿಂಗಳಿನಿಂದ ಕೊರೊನಾ ಜನರ ಜೀವವನ್ನು ಹಿಂಡುತ್ತಿದೆ.

ವೈರಸ್‍ಗೆ ಲಸಿಕೆ ಕಂಡುಹಿಡಿದಿಲ್ಲ. ದಿನೇ ದಿನೇ ಕೊರೊನಾ ಸೋಂಕು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ. ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿವರೆಗೆ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಯರಿಂದ ಹಿಡಿದು ಪೆÇಲೀಸರು, ವೈದ್ಯರನ್ನೂ ಕೊರೊನಾ ಬಿಟ್ಟಿಲ್ಲ. ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ.

ಗುಣಮುಖರಾಗುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ, ವೆಂಟಿಲೇಟರ್‍ಗಳ ಕೊರತೆ ಕಾಡುತ್ತಿದೆ. ಮನೆಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ.

ಅಲ್ಲದೆ, ಹಲವು ಸಮುದಾಯ ಭವನ, ಕ್ರೀಡಾಂಗಣ, ದೊಡ್ಡ ದೊಡ್ಡ ಮೈದಾನಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಕೈಗೊಳ್ಳುತ್ತಿದೆ. ಸರ್ಕಾರ ತನ್ನ ಕೈಲಾದ ಎಲ್ಲ ವ್ಯವಸ್ಥೆಯನ್ನೂ ರೋಗ ನಿಯಂತ್ರಣಕ್ಕಾಗಿ ಮಾಡುತ್ತಿದೆ.

ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಸರ್ಕಾರದ ಜತೆ ಕೈ ಜೋಡಿಸಿ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿ ರೋಗದಿಂದ ದೂರ ಇರಬೇಕು. ಇಲ್ಲದಿದ್ದರೆ ಸೋಂಕಿಗೆ ಬಲಿಯಾಗಬೇಕಾಗುತ್ತದೆ. ಈ ರೋಗ ತಮಗಷ್ಟೇ ಬರುವುದಿಲ್ಲ, ತಮ್ಮವರನ್ನೂ, ಸುತ್ತಮುತ್ತಲಿನವರೆಲ್ಲರನ್ನೂ ಬಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಕೈ ಮೀರುವ ಹಂತ ತಲುಪುತ್ತಿದೆ.

ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು. ಅನಗತ್ಯ ಓಡಾಟ ನಿಲ್ಲಿಸಬೇಕು. ಉಡಾಫೆ ಧೋರಣೆಯಿಂದ ವರ್ತಿಸುವುದನ್ನು ಕೈ ಬಿಡಬೇಕು. ಅತ್ಯಂತ ಎಚ್ಚರಿಕೆಯಿಂದ ಜಾಗರೂಕರಾಗಿರಬೇಕು.

ತಮ್ಮ ಮನೆಯಲ್ಲಿರುವ ಮಕ್ಕಳು, ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಚಿಕಿತ್ಸೆ ಸಿಗದೆ, ಆಸ್ಪತ್ರೆಗಳಲ್ಲಿ ಅವಕಾಶ ಸಿಗದೆ ಪರದಾಡುವುದಕ್ಕಿಂತ ಮನೆಯಲ್ಲಿ ಎಚ್ಚರಿಕೆಯಿಂದ ಇರುವುದು ಅತ್ಯಂತ ಸೂಕ್ತ.

ಕೊರೊನಾದೊಂದಿಗೆ ಬದುಕಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಎಚ್ಚರಿಕೆಯಿಂದ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸಿ ಬದುಕಿದರೆ ಕೊರೊನಾ ನಮ್ಮನ್ನು ಬಲಿ ಹಾಕುವುದಿಲ್ಲ. ನಾವು ಕೊರೊನಾ ನಿಯಂತ್ರಿಸಿ ಬದುಕಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಿ.

Facebook Comments