ಕೊರೊನಾ ವಾರಿಯರ್ಸ್‍ಗಾಗಿ ಹಿಪ್ ಅಪ್ ಸಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಪೊಲೀಸರಿಗಾಗಿ ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಹಿಪ್ ಅಪ್ ಗಾಯಕ ಲಾರ್ಡ್ ಆಫ್ ಅನಾನಮಿಟಿ ಅವರು ರಚಿಸಿರುವ ಹಾಡು ಸಂಗೀತ ಪ್ರಿಯರ ಮನ ಸೆಳೆಯಿತು.

ಪದ್ಮನಾಭ ನಗರದ ಕಾರ್ಮೆಲ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಅನಾನಮಿಟಿ ಅವರು ಪೊಲೀಸರಿಗೆ ಗೌರವ ಸೂಚಿಸಿ ರಚಿಸಲಿರುವ ರಾಜರ್ ದಟ್ ಜೆ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು.

ಇದೇ ಸಂದರ್ಭದಲ್ಲಿ ಅನಾನಮಿಟಿ ಅವರ ಜಾಗತಿಕ ಮನ್ನಣೆ ಪಡೆದಿರುವ 5 ಹಾಡುಗಳನ್ನು ಮಿಶ್ರಣ ಮಾಡಿ ಸಿದ್ಧಪಡಿಸಿರುವ ಮಿಕ್ಸರ್ ಆಫ್ ಸಾಂಗ್ ಬಿಡುಗಡೆ ಸಮಾರಂಭವು ವಿವೋ ವಾಹಿನಿ ಮೂಲಕ ಬಿಡುಗಡೆಯಾಯಿತು.

ಬೆಂಗಳೂರು ಮೂಲದ ಅನಾನಮಿಟಿ ಅವರು ಅಂತಾರಾಷ್ಟ್ರೀಯ ಹಿಪ್ ಅಪ್ ಗಾಯಕರಾಗಿ ಗುರುತಿಸಿಕೊಂಡಿದ್ದು ಕೊರೊನಾ ವಾರಿಯರ್ಸ್ ಪೊಲೀಸರಿಗಾಗಿ ಗೌರವ ಸೂಚಕವಾಗಿ ರಚಿಸಿರುವ ಹಾಡನ್ನು ಬನಶಂಕರಿ ಇನ್ಸ್‍ಪೆಕ್ಟರ್ ಮಂಜುನಾಥ್ ಶ್ಲಾಘಿಸಿದರು.

ಯುಕೆಯಲ್ಲಿ ಹಿಪ್ ಅಪ್ ಕೋರ್ಸ್ ಮಾಡಿ ಜಾಗತಿಕವಾಗಿ ಸಂಗೀತ ಪ್ರೇಮಿಗಳ ಹೃದಯ ಬಡಿತ ಹೆಚ್ಚಿಸಿರುವ ಅನಾನಮಿಟಿ ಅವರ ಹಾಡುಗಳು ಯಶಸ್ವಿಯಾಗಿದೆ. ಅವರ ಅಭಿಮಾನಿಯೊಬ್ಬರು ತಮ್ಮ ಹೆಲಿಕಾಪ್ಟರ್ ಮೇಲೆ ಲಾರ್ಡ್ ಜೆ ಎಂದು ಬರೆಸಿಕೊಂಡಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಮಂಜುನಾಥ್ ಬಣ್ಣಿಸಿದರು.

ವಿಶ್ವ ಪಿಡುಗಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ತಡೆಗಟ್ಟಲು ಪ್ರತಿಯೊಬ್ಬರು ಕೊರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು. ವ್ಯಕ್ತಿಗತ ಅಂತರ ಕಾಯ್ದುಕೊಂಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 40 ರಿಂದ 50 ಮಂದಿ ಪಾಲ್ಗೊಂಡು ಸರ್ಕಾರದ ಮಾರ್ಗಸೂಚಿಯಂತೆ ಸಮಾರಂಭ ನೆರವೇರಿತು.

Facebook Comments