ಕೊರೊನಾ ವಾರಿಯರ್ಸ್‍ಗೂ ಸುತ್ತಿಕೊಂಡ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್-19 ಮಹಾಮಾರಿ ಕೊರೊನಾ ವಾರಿಯರ್ಸ್‍ಗಳ ಆತ್ಮಸ್ಥೈರ್ಯಕ್ಕೂ ಕೊಳ್ಳಿ ಇಟ್ಟಿದೆ. ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು ಮತ್ತು ಪೊಲೀಸರಿಗೂ ಸೋಂಕು ತಗುಲುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ.

ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಕಂಟೈನ್ಮೆಂಟ್ ಝೋನ್, ಸೀಲ್‍ಡೌನ್ ಪ್ರದೇಶಗಳಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ದಿನೇ ದಿನೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅವರ ಆತ್ಮಸ್ಥೈರ್ಯ ಕುಗ್ಗಿಸಿದೆ.

ನಿನ್ನೆಯವರೆಗೂ 14 ಮಂದಿ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದ್ದರೆ, ಇದೇ ತಿಂಗಳು ನಿವೃತ್ತಿಯಾಗಬೇಕಿದ್ದ ಎಎಸ್‍ಐ ಒಬ್ಬರು ಮೃತಪಟ್ಟಿರುವುದು ಖಾಕಿ ಪಡೆಯನ್ನು ಕಂಗೆಡಿಸಿದೆ. ಹೊರರಾಜ್ಯದ ವಲಸಿಗರನ್ನು ಸುರಕ್ಷಿತವಾಗಿ ಅವರ ರಾಜ್ಯಗಳಿಗೆ ಕಳುಹಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಪೊಲೀಸರಿಗೆ ವಲಸಿಗರಿಂದಲೇ ಸೋಂಕು ತಗುಲಿರುವ ಸಾಧ್ಯತೆಗಳಿವೆ.

ಈಗಾಗಲೇ 14 ಮಂದಿ ಪೊಲೀಸರಿಗೆ ಸೋಂಕು ತಗುಲಿದ್ದು, ಇನ್ನೆಷ್ಟು ಮಂದಿಗೆ ಮಹಾಮಾರಿ ವಕ್ಕರಿಸಲಿದೆಯೋ ಎಂಬ ಆತಂಕ ಪೊಲೀಸರನ್ನು ಕಾಡುತ್ತಿದೆ. ಸೋಂಕು ಕಾಣಿಸಿಕೊಂಡ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಹಾಗೂ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ ಸೋಂಕು ತಗುಲುವ ಆತಂಕ ಶುರುವಾಗಿದೆ.
ಇದರ ಜತೆಗೆ ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋ ಯೂರಾಲಜಿ ಘಟಕದ ಮೂವರು ವೈದ್ಯರು ಸೇರಿದಂತೆ ಇನ್ನಿತರ ಹಲವಾರು ಖಾಸಗಿ ವೈದ್ಯರನ್ನೂ ಕಾಡದೆ ಬಿಟ್ಟಿಲ್ಲ ಈ ಮಹಾಮಾರಿ.

ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಕುಟುಂಬವನ್ನೇ ಮರೆತು ಕಾರಿನಲ್ಲೇ ವಾಸಿಸುತ್ತ ಹಲವಾರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ವೈದ್ಯೋ ನಾರಾಯಣ ಹರಿ ಎಂಬ ನಾಣ್ಣುಡಿಯ ಪ್ರತೀಕದಂತಿದ್ದ ಆ ವೈದ್ಯರಿಗೆ ಸಾರ್ವಜನಿಕರು ಪುಷ್ಪವೃಷ್ಟಿ ಸುರಿಸಿ ಸನ್ಮಾನಿಸಿದ್ದರು. ಆ ವೈದ್ಯರ ರೀತಿಯಲ್ಲೇ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಇನ್ನಿತರ ಹಲವಾರು ಆಸ್ಪತ್ರೆಗಳ ವೈದ್ಯರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಕೊರೊನಾ ಪೀಡಿತರ ಹಾರೈಕೆಯಲ್ಲಿ ತೊಡಗಿದ್ದಾರೆ.

ಇದೀಗ ವೈದ್ಯರು ಮತ್ತು ಪೊಲೀಸರಂತಹ ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಆತ್ಮಸ್ಥೈರ್ಯಕ್ಕೆ ಪೆಟ್ಟು ನೀಡಿದೆ.  ಸರ್ಕಾರ ಕೊರೊನಾ ವಾರಿಯರ್ಸ್‍ಗಳ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಮೂಲಕ ಪೊಲೀಸರು ಮತ್ತು ವೈದ್ಯರು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಆವಶ್ಯಕತೆ ಇದೆ.

Facebook Comments