ಕೊರೊನಾ ವಾರಿಯರ್ಸ್‍ಗಳಿಗೆ ಮರೀಚಿಕೆಯಾದ ವಿಮಾ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.20- ಕೋವಿಡ್-19 ಮುಂಚೂಣಿ ಹೋರಾಟಗಾರರಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸೇವೆ ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 50 ಲಕ್ಷ ರೂ. ವಿಮಾ ಸೌಲಭ್ಯ ಮರಿಚಿಕೆಯಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾಕಾರ್ಯಕರ್ತೆಯರು, ಪ್ರಯೋಗಾಲಯ ತಂತ್ರಜ್ಞರು, ವಾರ್ಡ್ ಬಾಯ್ಸ್, ಸಫಾಯಿ ಕರ್ಮಚಾರಿಗಳು ಸೇರಿದಂತೆ ಇತರ ಆರೋಗ್ಯ ಸೇವಾ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮಾ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದ್ದರು. ಇದು ಭಾರೀ ಪ್ರಚಾರ ಪಡೆದಿತ್ತು.

ಆದರೆ, ಸದ್ಯಕ್ಕೆ ಈ ಸೌಲಭ್ಯ ಸಿಗದೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಕುಟುಂಬ ಸದಸ್ಯರ ಸ್ಥಿತಿ ಅಯೋಮಯವಾಗಿದೆ. ಚಿಕ್ಕಮಗಳೂರಿನಲ್ಲಿ ವೈದ್ಯರೊಬ್ಬರು ಕೆಲಸ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಗದಗದಲ್ಲಿ ಆ್ಯಂಬುಲೆನ್ಸ್ ಚಾಲಕ ಕರ್ತವ್ಯದ ವೇಳೆಯಲ್ಲೇ ಪ್ರಾಣ ಕಳೆದುಕೊಂಡರು.

ಇದೇ ರೀತಿ ಕೋಲಾರ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 8ಮಂದಿ ಕೊರೊನಾ ವಿರುದ್ಧದ ಕರ್ತವ್ಯದ ವೇಳೆಯಲ್ಲೇ ಪ್ರಾಣ ಕಳೆದುಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆ ವರದಿ ತರಯಾರಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ನಿಯಮಾವಳಿಗಳು: ಕೊರೊನಾ ವೇಳೆ ಕೆಲಸ ಮಾಡುವಾಗ ಸೋಂಕು ತಗುಲಿ ಸಾವನ್ನಪ್ಪಿದವರಿಗೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 50 ಲಕ್ಷ ರೂ. ವಿಮೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಸಿ ರೂಪಿಸಿದೆ.

ಒಂದು ವೇಳೆ ಸಾವಿಗೆ ಪೂರ್ವಪೀಡಿತ ಕಾಯಿಲೆಗಳಿದ್ದರೆ ವಿಮೆ ಅನ್ವಯವಾಗುವುದಿಲ್ಲ ಎಂಬ ನಿಯಮಗಳಿವೆ. ಹೃದಯಾಘಾತ, ಮಧುಮೇಹ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಗಳಿಂದ ಸಾವನ್ನಪ್ಪಿದರೆ ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಮಾಗಸೂಚಿಗಳಿವೆ. ಚಿಕ್ಕಮಗಳೂರಿನಲ್ಲಿ ರಜೆ ಇಲ್ಲದೆ ನಿರಂತರವಾಗಿ ಕೆಲಸ ಮಾಡಿ ಒತ್ತಡಕ್ಕೊಳಗಾದ ವೈದ್ಯರು ಕುಸಿದು ಬಿದ್ದು ಸಾವನ್ನಪ್ಪಿದರು. ಗದಗದಲ್ಲಿ ಆ್ಯಂಬುಲೆನ್ಸ್ ಚಾಲಕನ ಪರಿಸ್ಥಿತಿಯೂ ಇದೇ ಆಗಿತ್ತು.

ಆದರೆ, ವಿಮೆ ನೀಡುವಾಗ ರೂಪಿಸಿರುವ ನಿಯಮಾವಳಿಗಳು ಆಕ್ಷೇಪಕ್ಕೆ ಕಾರಣವಾಗಿವೆ. ಕರ್ತವ್ಯಕ್ಕೆ ನಿಯೋಜಿಸುವಾಗ ಹೃದ್ರೋಗವಿದೆ, ಮಧುಮೇಹ ಇದೆ ಎಂದು ಹೇಳಿದರೂ ವಿನಾಯ್ತಿ ನೀಡುತ್ತಿಲ್ಲ. ಸರ್ಕಾರದ ಆದೇಶ ಪಾಲನೆ ಮಾಡಿ ಕೆಲಸ ಮಾಡಲೇಬೇಕಿದೆ. ಕೆಲಸ ಮಾಡುವಾಗ ಮೃತಪಟ್ಟರೆ ಅವರಿಗೆ ಈ ಮೊದಲೇ ಮಧುಮೇಹ, ಹೃದ್ರೋಗಗಳು ಇದ್ದವು ಎಂದು ಸಬೂಬು ಹೇಳಿ ಸೌಲಭ್ಯ ವಂಚಿಸುವ ಹುನ್ನಾರ ನಡೆಯುತ್ತಿವೆ.

ರಾಜ್ಯ ಆರೋಗ್ಯ ಇಲಾಖೆ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಹೃದ್ರೋಗ ಹಾಗೂ ಇತರ ಕಾರಣಗಳಿಂದ ಮೃತಪಟ್ಟಿದ್ದರೂ ಕರ್ತವ್ಯ ನಿರ್ವಹಣೆ ವೇಳೆ ಅವಘಡಗಳಾಗಿದ್ದರೆ ವಿಮೆ ನೀಡುವುದನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ. ಪೊಲೀಸರಿಗಿಲ್ಲ ವಿಮೆ: ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮುಂಚೂಣಿ ಹೋರಾಟಗಾರರಿಗೆ ವಿಮೆ ಅನ್ವಯವಾಗುತ್ತದೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳಂತೆ ಹಗಲಿರುಳು ದುಡಿಯುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳು , ಅಧಿಕಾರಿಗಳು, ಗೃಹ ರಕ್ಷಕದಳದವರಿಗೆ 50 ಲಕ್ಷ ವಿಮಾ ಸೌಲಭ್ಯ ಅನ್ವಯವಾಗುತ್ತಿಲ್ಲ. ಬೆಂಗಳೂರು ಒಂದರಲ್ಲೇ 38 ಮಂದಿ ಪೊಲೀಸರಿಗೆ ಕೊರೊನಾ ತಗುಲಿದೆ. ಅದರಲ್ಲಿ ಆರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾದರೆ, ಈವರೆಗೆ ಒಬ್ಬರು ಎಎಸ್‍ಐ ಹಾಗೂ ಒಬ್ಬರು ಕಾನ್‍ಸ್ಟೇಬಲ್ ಸೇರಿ ಇಬ್ಬರು ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸರು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡರೆ ಅವರ ವೇತನ ಆಧರಿಸಿ ಗರಿಷ್ಠ 30 ಲಕ್ಷದವರೆಗೂ ರಾಜ್ಯ ಸರ್ಕಾರ ವಿಮೆ ನೀಡುತ್ತಿದೆ. ಇದನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ವಿಮಾ ಸೌಲಭ್ಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಅನ್ವಯವಾಗುತ್ತಿಲ್ಲ.

ಪ್ರಾಣ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವವರ ನೈತಿಕ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಜಾರಿಯಾಗಬೇಕಿತ್ತು. ಆದರೆ, ಮೂಗಿಗೆ ತುಪ್ಪ ಸವರುವ ಯೋಜನೆಗಳು ಅಸ್ಥಿತ್ವದಲ್ಲಿದ್ದು, ಅದನ್ನು ಪಡೆಯಲು ಸಾಕಷ್ಟು ಅಡೆತಡೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

Facebook Comments