ಪೌರ ಕಾರ್ಮಿಕರಿಗೆ ಒಂದು ಕಡೆ ಸನ್ಮಾನ ಮತ್ತೊಂದೆಡೆ ಇಂದೆಂಥಾ ಅವಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.23- ಒಂದೆಡೆ ಕೊರೊನಾ ವಾರಿಯರ್ಸ್‍ಗಳಾದ ಪೌರಕಾರ್ಮಿಕರಿಗೆ ಸನ್ಮಾನ. ಮತ್ತೊಂದೆಡೆ ಕನಿಷ್ಠ ಅವರಿಗೆ ಕುಡಿಯಲು ನೀರು ಕೊಡದೆ ಅವಮಾನ. ಇದು ವ್ಯವಸ್ಥೆಯ ದುರಂತ. ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ನಗರದ ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.

ಕಳೆದ ಮೂರು ತಿಂಗಳಿನಿಂದಲೂ ಪೌರ ಕಾರ್ಮಿಕರು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಇವರ ಈ ಸವೆಯನ್ನು ಮನಗಂಡು ಅವರನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಲಾಗಿದೆ. ಬಹುತೇಕ ಕಡೆ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್‍ಗಳನ್ನು ರಾಜಕಾರಣಿಗಳು, ಸಂಘ-ಸಂಸ್ಥೆಯವರು ಹೂ ಮಳೆಗರೆದು ಸನ್ಮಾನಿಸಿದ್ದಾರೆ.

ಎಂತಹ ಸಂಕಷ್ಟ ಸಂದರ್ಭದಲ್ಲೂ ಬೆಳಗ್ಗೆ ಎದ್ದು ಕಸಗುಡಿಸುವ ಇವರು ಕೊರೊನಾ ಸೋಂಕಿತರ, ಶಂಕಿತರ ಶುಚಿಯ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ, ಬೆಂಗಳೂರು ಮಹಾನಗರದಲ್ಲೊಂದು ಮನಕಲಕುವ ದೃಶ್ಯ ನಡೆದಿದೆ.

ಬೆಳಗ್ಗೆ ಎದ್ದು ಕಸಗುಡಿಸಿ ಸುಸ್ತಾದ ನಾಲ್ವರು ಮಹಿಳಾ ಪೌರ ಕಾರ್ಮಿಕರು ಒಂದು ಮನೆಯ ಮುಂದೆ ಕುಡಿಯಲು ನೀರು ಕೊಡಿ ಎಂದು ಕೇಳಿದಾಗ ಮಹಿಳೆ ನಡೆದುಕೊಂಡ ರೀತಿ, ಅವರ ನಡವಳಿಕೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಇತ್ತು.

ಪೌರಕಾರ್ಮಿಕರನ್ನು ನೋಡಿ ಮೂಗು ಮುಚ್ಚಿಕೊಂಡು ಬಂದ ಈ ಮಹಿಳಾ ಮಹಾಮಣಿ ದೂರ ನಿಲ್ಲಿ ಎಂದು ಹೇಳಿ ಬಾಟಲಿಯಲ್ಲಿ ನೀರು ತಂದು ಕನಿಷ್ಠ ಅವರ ಕೈಗೆ ಕೊಡದೆ ರಸ್ತೆಯಲ್ಲಿಟ್ಟು ಹೋಗಿದ್ದಾರೆ. ಏನಮ್ಮ ಹೀಗೆ ಮಾಡ್ತೀಯಾ ಎಂದು ಪೌರ ಕಾರ್ಮಿಕರು ಕೇಳಿದ್ದಕ್ಕೆ ಹೂ ಕೊರೊನಾ ಅಂಟಿಸಿಕೊಳ್ಳಲ್ಲಿಕ್ಕಾ ಎಂದು ಮೂಗು ಮುರಿದುಕೊಂಡು ಹೋಗಿದ್ದಾರೆ.

ಲಾಕ್‍ಡೌನ್, ಸೀಲ್‍ಡೌನ್ ಇರಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ನೀಡುವ ಗೌರವ, ಮಾಡಿದ ಸನ್ಮಾನ ಇದೇನಾ. ಇದು ಬರಿ ತೋರಿಕೆನಾ ಎಂದಿನಿಸುತ್ತದೆ.  ಪಾಪ ಆ ಪೌರಕಾರ್ಮಿಕರೇನು ಮನೆ, ಆಸ್ತಿ ಏನಾದರು ಕೇಳಿದರೆ ? ಅವರಿಗೆ ನೀರು ಕೊಟ್ಟರೆ ಕೊರೊನಾ ಬರುತ್ತೇ ಅನ್ನುವುದಾದರೆ ನಿಮ್ಮ ಮನೆ, ರಸ್ತೆ, ಸಮಾಜವನ್ನು ಶುಚಿಯಾಗಿಡಲು ಅವರ ಕೈಗಳೇ ಬೇಕಲ್ಲವೆ ? ನೀರು ಕೇಳಿದ ಅವರನ್ನು ಇಷ್ಟು ನಿಷ್ಕøಷ್ಟವಾಗಿ ಕಾಣೋದಾ ? ಕನಿಷ್ಠ ಮಾನವೀಯತೆ ಬೇಡವೇ.

Facebook Comments