ವಿಮೆ ಹೆಸರಿನಲ್ಲಿ ಕೊರೊನಾ ವಾರಿಯರ್ಸ್ ಮೂಗಿಗೆ ತುಪ್ಪ ಸವರಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.6- ಕೋವಿಡ್ ಸೋಂಕು ಶುರುವಾದ ಆರಂಭದಲ್ಲಿ ದೇಶವೇ ಹೆದರಿ ಮನೆಯಲ್ಲಿ ಕುಳಿತಿದ್ದಾಗ ಪೊಲೀಸರು ಬೀದಿಯಲ್ಲಿ ನಿಂತು ಸೋಂಕಿನ ಸಾಧ್ಯತೆಗಳ ವಿರುದ್ಧ ಹೋರಾಡಿದರು, ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡುವ ಮೂಲಕ ಪ್ರಾಣ ಉಳಿಸಿದರು.

ಆಶಾ ಕಾರ್ಯಕರ್ತರು ಜಾಗೃತಿ ಮೂಡಿಸಿದರೆ, ಪೌರಕಾರ್ಮಿಕರು, ಸಫಾಯಿ ಕರ್ಮಾಚಾರಿಗಳು ಸ್ವಚ್ಚತೆಯ ಮೂಲಕ ಕೋವಿಡ್ ಸಮರದ ಕಾಲಾಳುಗಳಾಗಿದ್ದರು. ಆದರೆ ಈಗ ಪೊಲೀಸರು ಕೇಂದ್ರ ಸರ್ಕಾರ ಘೋಷಿಸಿದ 50 ಲಕ್ಷ ರೂಪಾಯಿ ವಿಮಾ ಸೌಲಭ್ಯ ಸಿಗದೆ ನಿರಾಶರಾಗಿದ್ದಾರೆ.

ಕೋವಿಡ್ ಸೋಂಕಿಗೆ ಸುಮಾರು 40ಕ್ಕೂ ಹೆಚ್ಚು ಮಂದಿ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 30 ಲಕ್ಷ ರೂಪಾಯಿಗಳ ಪರಿಹಾರ ನೀಡಿದೆ. ಈ ಹಿಂದೆ ಗುಲ್ಬರ್ಗದಲ್ಲಿ ಪಿಎಸïಐ ಮಲ್ಲಿಕಾರ್ಜುನ ಬಂಡೆ ಹಂತಕನ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ಕಳೆದುಕೊಂಡ ಪೊಲೀಸರಿಗೆ ಅವರ ಸೇವಾವಧಿಯಲ್ಲಿ ಗಳಿಸಬಹುದಾದ ವೇತನವನ್ನು ಅಂದಾಜಿಸಿ 30 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಯಿತು.

ಜೊತೆಗೆ ಕುಟುಂಬದ ಒಬ್ಬರಿಗೆ ಅನುಕಂಪ ಆಧರಿತ ಹುದ್ದ ನೀಡುವುದು, ನಿವೃತ್ತಿ ನಂತರ ಅವರಿಗೆ ಸಿಗಬೇಕಾದ ಪಿಂಚಣಿ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿತ್ತು. ಅನಂತರ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ಕಳೆದುಕೊಂಡ ಬಹಳಷ್ಟು ಮಂದಿಗೆ ಈ ಸೌಲಭ್ಯ ಸಿಕ್ಕಿದೆ.

ಕೋವಿಡ್ ನಿರ್ವಹಣೆ ವೇಳೆ ಪೊಲೀಸರ ಕಾರ್ಯತತ್ಪರತೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು. ಅನಗತ್ಯವಾಗಿ ಲಾಠಿ ಬೀಸಿದ್ದಕ್ಕಾಗಿ ಸಣ್ಣ ಪ್ರಮಾಣದ ಆಕ್ಷೇಪಕಗಳು ಕೇಳಿ ಬಂದರೂ ಕೊರೊನಾ ನಿಯಂತ್ರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಪ್ಯಾಕೇಜ್ ಘೋಷಿಸಿದಾಗ ಕೊರೊನಾ ವಾರಿಯರ್‍ಗಳಾಗಿ ಕೆಲಸ ಮಾಡುತ್ತಿರುವ ವೈದ್ಯರಿಗೆ, ನರ್ಸ್‍ಗಳಿಗೆ, ಆಶಾ ಕಾರ್ಯಕರ್ತರಿಗೆ, ಸಫಾಯಿ ಕರ್ಮಚಾರಿಗಳಿಗೆ 50 ಲಕ್ಷ ರೂಪಾಯಿ ವಿಮೆ ನೀಡುವುದಾಗಿ ಘೋಷಿಸಿತ್ತು. ಕೊರೊನಾ ನಿಯಂತ್ರಣದಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ ಪೊಲೀಸರನ್ನು ವಿಮೆಯಿಂದ ಹೊರಗಿಟ್ಟಾಗ ಅಸಮಾದಾನದ ಹೊಗೆಯಾಡಿತ್ತು.

ಅದನ್ನರಿತ ರಾಜ್ಯ ಸರ್ಕಾರ ಪೊಲೀಸರನ್ನು 50 ಲಕ್ಷ ರೂಪಾಯಿ ವಿಮೆ ವ್ಯಾಪ್ತಿಗೆ ಒಳ ಪಡಿಸುವುದಾಗಿ ಪ್ರಕಟಿಸಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಪೊಲೀಸರಿಗೂ 50 ಲಕ್ಷ ರೂಪಾಯಿ ವಿಮೆ ನೀಡುವುದಾಗಿ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದರು. ಕೇಂದ್ರ ಸರ್ಕಾರ ಪೊಲೀಸರಿಗೆ ವಿಮೆ ನೀಡುವ ಪ್ರಸ್ತಾವನೆಯನ್ನು ಪರಿಗಣಿಸಿಲ್ಲ.

ಕೊನೆಗೆ ರಾಜ್ಯ ಸರ್ಕಾರವೇ ಮೃತ ಪಟ್ಟ ಪೊಲೀಸರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆದರೆ ಇದು ಕೊರೊನಾ ವಾರಿಯರ್‍ಗಳಿಗೆ ನೀಡಿದ ವಿಶೇಷ ಸೌಲಭ್ಯವೇನಲ್ಲ. ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ಕಳೆದುಕೊಂಡ ಪೊಲೀಸರಿಗೆ ಸಿದ್ದರಾಮಯ್ಯ ಅವರ ಸರ್ಕಾರದ ಕಾಲದಿಂದ ನೀಡುತ್ತಿರುವ ಸೌಲಭ್ಯವಾಗಿದೆ.

30 ಲಕ್ಷ ಪರಿಹಾರವನ್ನು 50 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಹೈಕೋರ್ಟ್‍ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಮಾಣ ಪತ್ರ ಸಲ್ಲಿಸಿ ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿಗೆ ಹೆಚ್ಚಿಸಲು ಸಾಧ್ಯವಿಲ್ಲ ಎಂದಿದೆ.

ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಪೊಲೀಸರಿಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂಪಾಯಿ ಪರಿಹಾರ ನೀಡಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದಾಗ ಪ್ರಮಾಣ ಪತ್ರ ಸಲ್ಲಿಸಿರುವ ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರು, ರಾಜ್ಯ ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪೊಲೀಸರ ಜೊತೆಗೆ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ಸಿಬ್ಬಂದಿ, ಹೋಂ ಗಾರ್ಡ್, ನಾಗರಿಕ ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ, ಕಾರಾಗೃಹ ಸಿಬ್ಬಂದಿಗಳಿಗೂ ವಿಮಾ ಪರಿಹಾರದ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಮನವಿಯನ್ನು ತಳ್ಳಿ ಹಾಕಿದೆ.

Facebook Comments