ಕೊರೊನಾಗೆ ಬಲಿಯಾದವರನ್ನು ದರದರನೆ ಎಳೆದೊಯ್ದು ಅಮಾನವೀಯವಾಗಿ ಅಂತ್ಯಕ್ರಿಯೆ..! : ಬಳ್ಳಾರಿಯಲ್ಲಿ ಕ್ರೂರ ಘಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ಜೂ.30- ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಇಬ್ಬರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ಮಾಡಿದ ಘಟನೆ ನಡೆದಿದೆ. ಕೋವಿಡ್-19ನಿಂದ ಸಾವನ್ನಪ್ಪಿದವರನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರ ನಡೆಸಬೇಕು.

ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಅತ್ಯಂತ ಕ್ರೂರವಾಗಿ ಮಾಡಲಾಗಿದೆ. ಸಿಬ್ಬಂದಿಗಳು ಎರಡು ಮೃತ ದೇಹಗಳನ್ನು ದರದರನೆ ಎಳೆದುಕೊಂಡು ಹೋಗಿ ಒಂದೇ ಗುಂಡಿಯಲ್ಲಿ ಹಾಕಿ ಮುಚ್ಚಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಸಾರ್ವಜನಿಕರು ಪಾಲ್ಗೊಂಡರೆ ಸೋಂಕು ವ್ಯಾಪಿಸುತ್ತದೆ ನಿಜ. ಹಾಗೆಂದು ಅದಕ್ಕೊಂದು ಸಂಸ್ಕಾರ ಬೇಡವೆ? ಈ ಸೋಂಕಿನಿಂದ ನಿಧನರಾದವರನ್ನು ಆಳವಾದ ಗುಂಡಿಯಲ್ಲಿ ಹೂಳಬೇಕು.

ಆದರೆ, ಜಿಲ್ಲೆಯಲ್ಲಿ ಒಂದೇ ಗುಂಡಿಯಲ್ಲಿ ಎರಡೂ ಮೃತದೇಹಗಳನ್ನು ಹಾಕಿ ಹೂಳಿ ಅಮಾನವೀಯವಾಗಿ ಸಿಬ್ಬಂದಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಆರೋಗ್ಯಾಧಿಕಾರಿಗಳ ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಅವರು ಕೂಡ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಏನಾಗಿದೆ ಎಂದು ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರಲ್ಲದೆ ಮುಂದೆ ಇಂತಹ ಘಟನೆಗಳಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರು ಕೊರೊನಾ ಸೋಂಕು ತಗುಲಿಸಿಕೊಳ್ಳದಂತೆ ಎಚ್ಚರ ವಹಿಸುವುದು ಅತ್ಯಂತ ಸೂಕ್ತ. ಈ ಸೋಂಕಿನಿಂದ ಸಾವನ್ನಪ್ಪಿದರೆ ಬೀದಿ ಹೆಣವಾಗಬೇಕಾಗುತ್ತದೆ. ಅಂತ್ಯಕ್ರಿಯೆಗೂ ಯಾರೂ ಬರುವುದಿಲ್ಲ. ಬೇಕಾಬಿಟ್ಟಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಜನ ಮುನ್ನೆಚ್ಚರಿಕೆ ಕ್ರಮ ವಹಿಸಿ ಸ್ವಯಂಜಾಗೃತಿಯಿಂದ ಇರಬೇಕು.

Facebook Comments