ಸೂಕ್ತ ಚಿಕಿತ್ಸೆ ದೊರೆಯದೆ ಬೆಂಗಳೂರಿನಲ್ಲಿ ಕೊರೋನಾಗೆ ಮತ್ತಿಬ್ಬರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ಸೂಕ್ತ ಚಿಕಿತ್ಸೆ ದೊರೆಯದೆ ಮತ್ತಿಬ್ಬರು ಅಮಾನವೀಯವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯ 45 ವರ್ಷದ ಮಹಿಳೆ ಹಾಗೂ ಕಾಚರಕನಹಳ್ಳಿಯ ವೃದ್ಧರೊಬ್ಬರು ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟ ದುರ್ದೈವಿಗಳು.

45 ವರ್ಷದ ಮಹಿಳೆ ಕಳೆದ ಬುಧವಾರ ಮನೆಗೆ ಹೋಗುತ್ತಿದ್ದಾಗ ತಲೆ ತಿರುಗಿ ಕುಸಿದು ಬಿದ್ದರು. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಎಂವಿಜೆ, ಮಣಿಪಾಲ್ ಮತ್ತು ವೈದೇಹಿ ಆಸ್ಪತ್ರೆಗೆ ಸುತ್ತಾಡಿ ಕೊನೆಗೆ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ವೇಳೆ ಚಿಕಿತ್ಸೆ ನೀಡಿದ ವೈದ್ಯರು ಮೆದುಳಿಗೆ ತೀವ್ರ ಪೆಟ್ಟಾಗಿರುವುದರಿಂದ ಬೇರೆ ಐಸಿಯು ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.

ಕುಟುಂಬಸ್ಥರು ಐಸಿಯು ಚಿಕಿತ್ಸೆಗಾಗಿ ನಗರದ ಹಲವಾರು ಆಸ್ಪತ್ರೆಗಳಿಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೆಲವು ಕಡೆ ಬೆಡ್ ಖಾಲಿ ಇಲ್ಲ ಎಂದರೆ, ಮತ್ತೆ ಕೆಲವರು ಕೋವಿಡ್ ರಿಪೋರ್ಟ್ ಬಂದರೆ ಮಾತ್ರ ಚಿಕಿತ್ಸೆ ನೀಡುವುದಾಗಿ ಜಾರಿಕೊಂಡರು.

ಹೀಗಾಗಿ ಕಳೆದ ಎರಡು ದಿನಗಳಿಂದ ಸೂಕ್ತ ಚಿಕಿತ್ಸೆ ದೊರೆಯದೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮಹಿಳೆಯ ಸಾವಿಗೆ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಾಚರಕನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲು ಅಲೆದಾಡಿಸಿದ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವೃದ್ಧ ಸಾವನ್ನಪ್ಪಿದ್ದಾನೆ.

ಮೃತಪಟ್ಟ ವೃದ್ಧನ ಸ್ವಾಬ್ ಪರೀಕ್ಷೆ ನಡೆಸಿದಾಗ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಪತ್ನಿ ಹಾಗೂ ಮಗನನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.  ಕೊರೊನಾಗೆ ಮತ್ತಿಬ್ಬರು ಬಲಿ: ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 54 ವರ್ಷದ ಮಹಿಳೆ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಅದೇ ರೀತಿ ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇನ್ನೇನು ಆಸ್ಪತ್ರೆಗೆ ದಾಖಲು ಮಾಡಬೇಕು ಎನ್ನುವಷ್ಟರಲ್ಲೇ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

# ಬಿಬಿಎಂಪಿಗೆ ಕೊರೋನಾ ಭೀತಿ:
ಬಿಬಿಎಂಪಿಯ ಕಂದಾಯ, ಆರೋಗ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಗೂ ಎಇ ಮತ್ತು ಎಇಇ ಸೇರಿದಂತೆ ಹದಿನೈದಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು ಬಿಬಿಎಂಪಿ ಆವರಣದಲ್ಲಿ ಆತಂಕ ಸೃಷ್ಟಿಸಿದೆ.

Facebook Comments