ಭಾರತದಲ್ಲಿ ಕೋವಿಡ್ ಸೋಂಕಿನ ಹಿಂದಿನ ದಾಖಲೆಗಳು ಛಿದ್ರ, ಒಂದೇ ದಿನ 62,538 ಪಾಸಿಟಿವ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಆ.7-ಆರೋಗ್ಯ ತಜ್ಞರ ಮುನ್ಸೂಚನೆಯಂತೆ ದೇಶಕ್ಕೆ ಆಗಸ್ಟ್ ತಿಂಗಳ ಕೋವಿಡ್-19 ವೈರಸ್‍ನ ಗಂಡಾಂತರ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಲೇ ಇದ್ದು, ಮೊದಲ ವಾರದಲ್ಲೇ ರೋಗ ಉಲ್ಬಣದ ಮಹಾ ಸ್ಫೋಟ ಸಂಭವಿಸಿದೆ. ಸಾಂಕ್ರಾಮಿಕ ರೋಗದ ಹಿಂದಿನ ದಾಖಲೆಗಳೆಲ್ಲವೂ ಛಿಧ್ರವಾಗಿದ್ದು ಒಂದೇ ದಿನ 62,500ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 21 ಲಕ್ಷ ಮತ್ತು ಮೃತರ ಸಂಖ್ಯೆ 42,000 ಸನಿಹದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.. 24 ತಾಸುಗಳಲ್ಲಿ 62,538 ಹೊಸ ಸೋಂಕು ಮತ್ತು 886 ಸಾವಿನ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 13.78 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಸಾವಿನ ಕುಣಿಕೆಯಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ..67.98ರಷ್ಟು ಏರಿಕೆ ಕಂಡುಬಂದಿದೆ.

ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 62,538 ಜನರಿಗೆ ಸಾಂಕ್ರಾಮಿಕ ರೋಗ ತಗುಲಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಇಷ್ಟು ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಸತತ ಒಂಭತ್ತು ದಿನಗಳಿಂದ 50,000+ ಹಾಗೂ 16 ದಿವಸಗಳಿಂದಲೂ ನಿರಂತರವಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 45,000+ ಪ್ರಮಾಣದಲ್ಲೇ ಮುಂದುವರಿದಿರುವುದು ಚಿಂತಾಜನಕ ಸಂಗತಿಯಾಗಿದೆ..

24 ತಾಸುಗಳಲ್ಲಿ 886 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 41,585ಕ್ಕೇರಿದೆ.. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 20,27,074 ದಾಟಿರುವುದು ಕಳವಳಕಾರಿ ಸಂಗತಿಯಾಗಿದೆ. ನಾಳೆ ವೇಳೆಗೆ ರೋಗ ಪೀಡಿತರ ಸಂಖ್ಯೆ 21 ಲಕ್ಷ ಮತ್ತು ಮೃತರ ಸಂಖ್ಯೆ 42,000 ದಾಟಲಿದೆ..

ದೇಶದಲ್ಲಿ ಈಗ 6,07,389 ಆಕ್ಟಿವ್ ಕೇಸ್‍ಗಳಿದ್ದು, 13,78,108 ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.67.98 ಮತ್ತು ಸಾವಿನ ಪ್ರಮಾಣ ಶೇ.2.06ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇವೆÉ.

ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿನ ಅಲ್ಪ ಮತ್ತು ಲಘು ಲಕ್ಷಣ ಇರುವ ರೋಗಿಗಳಿಗಾಗಿ ಕೆಲವು ಮಾತ್ರೆಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಬಲ ಲಸಿಕೆ ಅಭಿವೃದ್ದಿಗೊಳಿಸುವ ಕಾರ್ಯ ಮುಂದುವರಿದಿದ್ದು, ಶೀಘ್ರದಲ್ಲಿ ಅದು ಲಭ್ಯವಾಗುವ ನಿರೀಕ್ಷೆ ಇದೆ.

Facebook Comments