ಬಿಗ್ ಬ್ರೇಕಿಂಗ್ : 24 ಗಂಟೆಯಲ್ಲಿ 17 ಮಂದಿಗೆ ಕೊರೊನಾ, ಪೊಲೀಸರಿಗೆ ಕೋವಿಡ್ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಸಾಂಸ್ಕøತಿಕ ನಗರಿ ಮೈಸೂರು ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದು, ಇಂದು ಒಂದೇ ದಿನ 10 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದರೆ, ಕಲಬುರ್ಗಿಯ ಒಂದು ವರ್ಷದ ಹಸುಗೂಸು ಹಾಗೂ ಪೊಲೀಸ್ ಪೇದೆ ಸೇರಿದಂತೆ ಕಳೆದ 24 ಗಂಟೆಯಲ್ಲಿ 17 ಮಂದಿಗೆ ಕೊರೊನಾ ವೈರಸ್ ಅಟ್ಯಾಕ್ ಆಗಿದೆ.

ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬ ನಗರದಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 11ಕ್ಕೇರಿದ್ದು, ಒಟ್ಟಾರೆ ರಾಜ್ಯದಲ್ಲಿ 277 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 65 ವರ್ಷದ ಚಿಕ್ಕಬಳ್ಳಾಪುರದ ವೃದ್ಧರೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 13ರಂದು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ದಾಖಲಾಗಿದ್ದರು.

ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 277 ಮಂದಿ ಕೊರೊನಾ ಸೋಂಕಿತರಲ್ಲಿ 75 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ದೃಢಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದ ಅನಂತಪುರಂ ಮೂಲದ 59 ವರ್ಷದ ವ್ಯಕ್ತಿಯೊಬ್ಬರು ಹಾಗೂ ನಗರದ 38 ವರ್ಷದ ಮಹಿಳೆಯರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಕಾನ್‍ಸ್ಟೇಬಲ್ ಸೇರಿದಂತೆ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್ ಆಗಿದೆ. ಬಾಗಲಕೋಟೆಯ 52 ವರ್ಷದ ವ್ಯಕ್ತಿ ಹಾಗೂ ಜಮಖಂಡಿಯ ಮದರಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 39 ವರ್ಷದ ಪೊಲೀಸ್ ಕಾನ್‍ಸ್ಟೇಬಲ್‍ಗೆ ಕೊರೊನಾ ಸೋಂಕು ತಗುಲಿದೆ.

ಮೈಸೂರಿನಲ್ಲಿ ಇಂದು ಒಂದೇ ದಿನ 10 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ನಂಜನಗೂಡಿನ ಜುಬಿಲಿಯಂಟ್ ಫಾರ್ಮಾ ಕಂಪೆನಿಯ 8 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರೆ, ಮೈಸೂರಿನ ಇಬ್ಬರು ವ್ಯಕ್ತಿಗಳಲ್ಲೂ ಪಾಸಿಟಿವ್ ವರದಿ ಬಂದಿದೆ. ಕಲಬುರ್ಗಿಯ ಒಂದು ವರ್ಷದ ಗಂಡು ಮಗುವಿಗೂ ಕೊರೊನಾ ಮಹಾಮಾರಿ ವಕ್ಕರಿಸಿದೆ. ವಿಜಯಪುರದ 25 ವರ್ಷದ ಯುವಕ ಹಾಗೂ 38 ವರ್ಷದ ಮಹಿಳೆಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

Facebook Comments

Sri Raghav

Admin